Home Crime ಮನೆಗೆ ನುಗ್ಗಿ 4.13 ಲಕ್ಷ ರೂ. ಮೌಲ್ಯದ ನಗ ನಗದು ದೋಚಿದ ಕಳ್ಳರು…!!

ಮನೆಗೆ ನುಗ್ಗಿ 4.13 ಲಕ್ಷ ರೂ. ಮೌಲ್ಯದ ನಗ ನಗದು ದೋಚಿದ ಕಳ್ಳರು…!!

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಚಿಲಕ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕಳ್ಳತನ ಮಾಡಿದ ಘಟನೆ ಬಂಟ್ವಾಳ ಸಮೀಪದ ಮೂಡ ಗ್ರಾಮದ ಗೋರೆಮಾರ್‌ಎಂಬಲ್ಲಿ ನಡೆದಿದೆ.

ಮನೆಯ ಸ್ಟೀಲ್ ಕಬಾಟಿನ ಲಾಕರ್ ನಲ್ಲಿ ಇಟ್ಟಿದ್ದ ಸುಮಾರು 16 ಗ್ರಾಂ ತೂಕದ 3 ಜತೆ ಚಿನ್ನದ ಬೆಂಡೋಲೆ, ಸುಮಾರು 18 ಗ್ರಾಂ ತೂಕದ ಕೈ ಉಂಗುರಗಳು 3 ಹಾಗೂ ನಗದು 65,000 ರೂ. ಕಳವಾಗಿದೆ. ಜತೆಗೆ ಮನೆಯ ದೇವರ ಮಂಟಪದಲ್ಲಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಬೆಳ್ಳಿಯ ಶ್ರೀಕೃಷ್ಣ ದೇವರ ವಿಗ್ರಹ ಮತ್ತು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 5,000 ರೂ. ಕಳವು ಆಗಿದ್ದು ಕಳವಾದ ಚಿನ್ನದ ಅಂದಾಜು ಬೆಲೆ 3,23,000 ಮತ್ತು ಕಳವಾದ ಸೊತ್ತುಗಳು ಹಾಗೂ ನಗದು ಸೇರಿ ಒಟ್ಟು ಮೌಲ್ಯ 4,13,000 ರೂ. ಆಗಬಹುದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮನೆಯ ಯಜಮಾನ ಪ್ರಕಾಶ್ ಅವರು ಕೇರಳದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದರು. ಮನೆಯಲ್ಲಿ ಪತ್ನಿ ಮಕ್ಕಳು ಅತ್ತೆ ಇದ್ದರು. ಶಾಲೆಗೆ ರಜಾ ಹಿನ್ನೆಲೆಯಲ್ಲಿ ಮನೆಯವರು ಬಂಧುಗಳಲ್ಲಿಗೆ ತೆರಳಿದ್ದರು.

ಹೂವಿನ ಗಿಡಗಳಿಗೆ ನೀರು ಹಾಕಲು ನೆರೆಮನೆಯ ವ್ಯಕ್ತಿಗೆ ವಹಿಸಿದ್ದು, ಮೇ 6 ರಂದು ಹೂವಿನ ಗಿಡಗಳಿಗೆ ನೀರು ಹಾಕಲು ಬಂದಿದ್ದಾಗ ಮನೆಯ ಎದುರಿನ ಬಾಗಿಲು ತೆರೆದಿರುವುದನ್ನು ಗಮನಿಸಿ ಮನೆಯವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಮನೆಗೆ ಬಂದು ನೋಡಿದಾಗ ಎರಡು ಬೆಡ್ ರೂಂನಲ್ಲಿದ್ದ 3 ಸ್ಟೀಲ್ ಕವಾಟು, ಹಾಲ್ ನಲ್ಲಿದ್ದ 1 ಸ್ಟೀಲ್ ಕವಾಟ್, ಸ್ಟೇರ್ ಕೇಸ್ ಬಳಿಯಿದ್ದ ಸ್ಟೀಲ್ ಕಪಾಟನ್ನು ಆಯುಧದಿಂದ ಮೀಟಿ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ ಅದರಲ್ಲಿ ಇರಿಸಲಾಗಿದ್ದನಗೆ ಹಾಗೂ ನಗದು ಕಳವು ಮಾಡಿದ್ದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.