ಉಡುಪಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ಕಜನಡ್ಕದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ದಿನಾಂಕ 18-05-2026ರಂದು ಬೆಳಿಗ್ಗೆ ಸುಮಾರು 6:40 ಗಂಟೆಗೆ ಪಿಎಸ್ಐ (ತನಿಖೆ) ಅನಿಲ್ ಕುಮಾರ್ ಟಿ ನಾಯ್ಕ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ KA19A6151 ಸಂಖ್ಯೆಯ 407 ಟರ್ಬೋ ವಾಹನವನ್ನು ತಡೆದು ಪರಿಶೀಲಿಸಲಾಯಿತು. ಈ ವೇಳೆ ಮೂರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾಯಿತು.
ಪ್ರಕರಣ ಸಂಬಂಧ ಪಡುಬಿದ್ರಿಯ ಅಬ್ಬಾಸ್‌ಗುಡ್ಡೆಯ ಇಸ್ಮಾಯಿಲ್ (42) ಹಾಗೂ ಮೂಲ್ಕಿ ತಾಲೂಕಿನ ಕರ್ನಿರೆಯ ಮಹಮ್ಮದ್ (62) ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತ ಆರೋಪಿ ಇಸ್ಮಾಯಿಲ್ ವಿರುದ್ಧ ಮಂಗಳೂರು ಬರ್ಕೆ ಠಾಣೆ, ಮುಲ್ಕಿ ಠಾಣೆ, ಬಂಟ್ವಾಳ ನಗರ ಠಾಣೆ, ಸುರತ್ಕಲ್ ಠಾಣೆ, ಕಾರ್ಕಳ ನಗರ ಠಾಣೆ ಹಾಗೂ ಹೆಬ್ರಿ ಠಾಣೆಗಳಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯಡಿ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ವಶಪಡಿಸಿಕೊಂಡ ವಾಹನ ಹಾಗೂ ದನಗಳ ಒಟ್ಟು ಅಂದಾಜು ಮೌಲ್ಯ ₹4.25 ಲಕ್ಷ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಅನಿಲ್ ಕುಮಾರ್ ಅವರೊಂದಿಗೆ ಎಎಸ್‌ಐ ದಿನಕರ, ಹೆಚ್‌ಸಿ ನವೀನ್ ಕುಮಾರ್, ಅಶ್ವಿನ್ ಕುಮಾರ್, ಕೃಷ್ಣ ಪ್ರಸಾದ್, ಪಿಸಿಗಳಾದ ಸಂದೇಶ್, ಪ್ರಭು ಅಥಣಿ, ರಾಘವೇಂದ್ರ, ಅಣ್ಣಪ್ಪ ಹಾಗೂ ಶ್ರೀಧರ್ ಭಾಗವಹಿಸಿದ್ದರು.
ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 63/2026ರಡಿ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960ರ ಕಲಂ 11(1)(ಎ), 11(1)(ಡಿ), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 4, 5, 7, ಬಿ.ಎನ್.ಎಸ್ ಕಲಂ 112, 303(2) ಜೊತೆಗೆ 3(5) ಹಾಗೂ ಐಎಂವಿ ಕಾಯ್ದೆಯ ಕಲಂ 66 ಜೊತೆಗೆ 192(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.




