Home Latest ತುಳುನಾಡಿನ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್…!!

ತುಳುನಾಡಿನ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್…!!

ಮಂಗಳೂರು : ದಕ್ಷಿಣಕನ್ನಡ ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರು ತುಳುನಾಡಿನ ಕಾರಣಿಕ ದೈವವಾದ ಸ್ವಾಮಿ ಕೊರಗಜ್ಜನಿಗೆ ತಮ್ಮ ಹರಕೆ ಕೋಲ ಸೇವೆಯನ್ನು ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಗುವ ದೈವಾರಾಧನೆಗೆ ಚಿತ್ರರಂಗದ ಗಣ್ಯರು ಭೇಟಿ ನೀಡುವುದು ಸಾಮಾನ್ಯವಾಗಿದ್ದು, ಇದೀಗ ನಟಿ ರಚಿತಾ ರಾಮ್ ಕೂಡ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಪ್ರಸಿದ್ಧ ಕೊರಗಜ್ಜ ಸನ್ನಿಧಿಯಲ್ಲಿ ಈ ಹರಕೆ ಕೋಲ ಸೇವೆ ನಡೆದಿದೆ. ನಟಿ ರಚಿತಾ ರಾಮ್ ಅವರು ತಾನು ಅಂದುಕೊಂಡ ಕೆಲವು ಪ್ರಮುಖ ಕೆಲಸಗಳು ಯಶಸ್ವಿಯಾಗಿ ನೆರವೇರಿದರೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ನೀಡುವುದಾಗಿ ಈ ಹಿಂದೆ ಹರಕೆ ಹೊತ್ತಿದ್ದರು. ತಾವು ಅಂದುಕೊಂಡ ಕಾರ್ಯಗಳು ಸಿದ್ದಿಸಿದ ಹಿನ್ನೆಲೆಯಲ್ಲಿ, ಅವರು ಶ್ರದ್ಧಾಭಕ್ತಿಗಳಿಂದ ಬೆಂಜನಪದವಿಗೆ ಆಗಮಿಸಿ ತಮ್ಮ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿಯಾಗಿರುವ ರಚಿತಾ ರಾಮ್, ಈಗಾಗಲೇ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆ ಹಾಗೂ ಕ್ಯೂಟ್ ಡಿಂಪಲ್ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಇವರು, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ರಚಿತಾ ರಾಮ್ ಅವರು ಧ್ರುವ ಸರ್ಜಾ ನಾಯಕತ್ವದ ಬಹುನಿರೀಕ್ಷಿತ ‘ಕ್ರಿಮಿನಲ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ನೀನಾಸಂ ಸತೀಶ್ ಕಾಂಬಿನೇಷನ್‌ನ ಸೂಪರ್ ಹಿಟ್ ಚಿತ್ರದ ಸೀಕ್ವೆಲ್ ‘ಅಯೋಗ್ಯ 2’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈ ಸಿನಿಮಾಗಳ ಮೇಲಿನ ನಿರೀಕ್ಷೆ ಗಾಂಧಿನಗರದಲ್ಲಿ ಸಖತ್ ಜೋರಾಗಿದೆ.

ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ರಚಿತಾ ರಾಮ್ ತಮ್ಮ ಬ್ಯುಸಿನೆಸ್ ವಿಸ್ತರಿಸುತ್ತಿದ್ದಾರೆ. ಸದ್ಯ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಅವರ ಸಿನಿಮಾದ ಮಾತುಕತೆ ಅಂತಿಮ ಹಂತದಲ್ಲಿದೆ. ಅಷ್ಟೇ ಅಲ್ಲದೆ, ತೆಲುಗು ಚಿತ್ರರಂಗದಲ್ಲೂ ಅವರು ಎರಡು ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದು, ಆ ಚಿತ್ರಗಳ ಅಧಿಕೃತ ಘೋಷಣೆ ಇದೇ ತಿಂಗಳಲ್ಲಿ ಹೊರಬೀಳಲಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಹೊಸ ಪ್ರಾಜೆಕ್ಟ್‌ಗಳ ಯಶಸ್ಸಿಗಾಗಿ ಅವರು ದೈವದ ಆಶೀರ್ವಾದ ಪಡೆದಿದ್ದಾರೆ.