ಗೋವಾ : ನಗರದ ಕ್ಯಾಲಂಗಟ್ ಬೀಚ್ ನ ರೆಸಾರ್ಟ್ ನಲ್ಲಿ ಮಲ್ಪೆ ಮೂಲದ ಸಂದೀಪ್ ಸಲ್ಯಾನ್ ಸಾವಿನ ಪ್ರಕರಣದಲ್ಲಿ ಗೋವಾ ಪೊಲೀಸರು ಮಹಿಳೆಯ ಮೇಲೆ ಸಂಶಯ ವ್ಯಕ್ತ ಪಡಿಸಿದ್ದಾರೆ.
ಸಂದೀಪ್ ಜೊತೆಗೆ ಇದ್ದ ಮಹಿಳೆ ಯಾರು?, ಈಕೆ ಆತನ ಸಾವಿನ ನಂತರ ಯಾಕೆ ಪರಾರಿಯಾದಳು?, ಈ ಸಾವು ಕೊಲೆಯೋ ಅಥವಾ ಹೃದಯಾಘಾತವೋ ಎಂಬುವುದು ಆಕೆಯ ಬಂಧನದ ನಂತರ ತಿಳಿದು ಬರಬೇಕಿದೆ.
ಕ್ಯಾಸಿನೋ ವೊಂದರಲ್ಲಿ ಸಂದೀಪ್ ಗೆ ಈ ಮಹಿಳೆ ಪರಿಚಯವಾಗಿದ್ದಾಳೆ. ಆಕೆ ತುಳು ಭಾಷೆಯಲ್ಲಿ ಮಾತನಾಡಿ ತಾನು ಹಿರಿಯಡ್ಕ ನಿವಾಸಿ ಎಂದ ಆತನ ಬಳಿ ಹೇಳಿ ಕೊಂಡಿದ್ದಾಳೆ. ನಂತರ ಇಬ್ಬರು ಕ್ಯಾಲಂಗಟ್ ಬೀಚ್ ನ ರೆಸಾರ್ಟ್ ಗೆ ಬಂದಿದ್ದಾರೆ. ಒಂದು ದಿನದ ಬಳಿಕ ಸಂದೀಪ್ ಸಾವನ್ನಪ್ಪಿದ್ದಾನೆ ಎಂದು ಆತನ ಜೊತೆಗೆ ಗೋವಾಕ್ಕೆ ಹೋದ ಸ್ನೇಹಿತರಿಗೆ ವಿಚಾರ ತಿಳಿದು ಬಂದಿದೆ.
ಸಂದೀಪ್ ನ ಸಾವಿನ ಬಳಿಕ ಆ ಮಹಿಳೆ ಅಲ್ಲಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಸಂದೀಪ್ ನ ಮೈಮೇಲೆ ಇದ್ದ ಚಿನ್ನ ಹಾಗೂ ಹಣ ಕೂಡ ಕಾಣೆಯಾಗಿದೆ. ಮಹಿಳೆ ಗೋವಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದ್ದಾಳೆ ಎಂದು ಪೊಲೀಸರಿಂದ ತಿಳಿದು ಬಂದಿದೆ. ಗೋವಾ ಪೊಲೀಸರು ಆ ಮಹಿಳೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಸಂದೀಪ್ ಸಾವಿನ ಸುದ್ದಿ ತಿಳಿದಂತೆ ಸ್ನೇಹಿತರು ಹಾಗೂ ಮಲ್ಪೆಯ ಜನರು ಬೇಸರ ವ್ಯಕ್ತ ಪಡಿಸಿದ್ದಾರೆ. ಸಂದೀಪ್ ಸಾವಿಗೆ ಕಾರಣವಾದ ಆ ಮಹಿಳೆ ಯಾರು.? ಹಾಗೂ ಆಕೆಯನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಸಂದೀಪ್ ಸಾವಿನ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೋವಾ ಪೊಲೀಸರಿಗೆ ಒತ್ತಾಯಿಸಿದ್ದಾರೆ.










