ಉಡುಪಿ: ಬೀದಿನಾಯಿ ಹಾವಳಿ ತಪ್ಪಿಸಲು ಸರ್ವೋಚ್ಛ ನ್ಯಾಯಾಲಯವು ಹೊರಡಿಸಿರುವ ಆದೇಶದನನ್ವಯ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿರುವುದು, ಅದರಂತೆ ಬೀದಿನಾಯಿಗಳ ಆಶ್ರಯ ತಾಣ ನಿರ್ಮಾಣಕ್ಕೆ ಉಡುಪಿ ಜಿಲ್ಲೆಯಲ್ಲಿ 18.50 ಎಕರೆ ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಬೀದಿನಾಯಿಗಳ ಹಾವಳಿ ತಡೆಗಟ್ಟುವ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹೇಳಿದರು.
ಜಾಗ ಎಲ್ಲೆಲ್ಲಿ ಮೀಸಲಾಗಿದೆ? ರೇಬಿಸ್ ಕಾಯಿಲೆ, ಸಂಶಯಾಸ್ಪದ ರೋಗ ಪೀಡಿತ ಅಥವಾ ಆಕ್ರಮಣಕಾರಿ ಇರುವ ನಾಯಿಗಳನ್ನು ಹಿಡಿದು ಆಶ್ರಯ ತಾಣಕ್ಕೆ ಬಿಡಬೇಕಾಗುತ್ತದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 9 ಎಕರೆ, ಸಾಲಿಗ್ರಾಮ ಪಪಂನ ಗಿಳಿಯಾರುನಲ್ಲಿ 3 ಎಕರೆ, ಕುಂದಾಪುರ ತಾಲೂಕಿನ ಕಂದಾವರದಲ್ಲಿ 1.5 ಎಕರೆ, ಕಾಪು ತಾಲೂಕಿನ ಶಿರ್ವದಲ್ಲಿ 3 ಎಕರೆ, ಕಾರ್ಕಳದಲ್ಲಿ 1 ಎಕರೆ, ಬೈಂದೂರಿನಲ್ಲಿ 1 ಎಕರೆ ಜಾಗ ಗುರುತಿಸಲಾಗಿದೆ ಎಂದು ಹೇಳಿದರು.
ಈ ಜಾಗದಲ್ಲಿ ಮಾರ್ಗಸೂಚಿಯಂತೆ ಈ ನಾಯಿಗಳಿಗೆ ಅಗತ್ಯವಿರುವ ಆಹಾರ, ನೀರು, ನೆರಳು, ಪಶು ವೈದ್ಯಕೀಯ ಚಿಕಿತ್ಸೆಗಳ ವ್ಯವಸ್ಥೆ ಇರುವ ಆಶ್ರಯ ತಾಣಗಳನ್ನು ಕೂಡಲೇ ನಿರ್ಮಾಣ ಮಾಡಿ, ಅಲ್ಲಿ ಡಾಗ್ ಶೆಲ್ಟರ್ ಎಂಬ ಬೋರ್ಡನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.



