ಬ್ರಹ್ಮಾವರ : ಕಾರು- ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ನಡೆದಿದೆ. ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೊರವಾಡಿಯ ಪ್ರಕಾಶ್ ಮೊಗವೀರ (46) ಎಂಬುವವರು ದುರ್ಮರಣಕ್ಕೀಡಾಗಿದ್ದಾರೆ.
ಮೂಲಗಳ ಪ್ರಕಾರ, ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು, ಮುಂಭಾಗದಲ್ಲಿ ಪ್ರಕಾಶ್ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಪ್ರಕಾಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




