Home Latest ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದು ಮೃತ್ಯು

ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದು ಮೃತ್ಯು

ಉಡುಪಿ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಲ್ಪೆ ಸಮೀಪದ ನೇಜಾರು ಜ್ಯೋತಿ ನಗರದಲ್ಲಿ ಶುಕ್ರವಾರ ಸಂಭವಿಸಿದೆ.

 

ನೇಜಾರು ಆದರ್ಶ ನಗರದ ಇನಾಯತುಲ್ಲಾ ಎಫ್.ಎಂ. ಹಾಗೂ ಮುಸರ್ರಥ್ ಎಫ್.ಎಂ. ದಂಪತಿ ಪುತ್ರ, ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (12) ಮೃತಪಟ್ಟ ಬಾಲಕ.

 

ಹೂಡೆ ಸಾಲಿಹಾತ್ ಪಿಯು ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ಮುಸರ್ರಥ್, ತನ್ನ ಇಬ್ಬರು ಮಕ್ಕಳೊಂದಿಗೆ ಶಾಲೆಯಿಂದ ಪುಸ್ತಕ ತೆಗೆದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ದಾರಿ ಮಧ್ಯದಲ್ಲಿ ಜುಮಾ ನಮಾಝ್ಗೆ ತೆರಳಲು ನೇಜಾರು ಆಯಿಷಾ ಮಸೀದಿ ಬಳಿ ಅಬ್ದುಲ್ ರೆಹಮಾನ್ ಇಳಿದಿದ್ದನು.

 

ರಸ್ತೆ ದಾಟುತ್ತಿದ್ದ ಅಬ್ದುಲ್ ರೆಹಮಾನ್ಗೆ ಸಂತೆಕಟ್ಟೆಯಿಂದ ಕೆಮ್ಮಣ್ಣು ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್ನನ್ನು ಕೂಡಲೇ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

 

ಆದರೆ, ದಾರಿ ಮಧ್ಯೆಯೇ ಮೃತಪಟ್ಟನೆಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿಯು ತಂದೆ-ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯನ್ನು ಅಗಲಿದ್ದಾನೆ.

 

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.