Home Karnataka News ನಟ ದರ್ಶನ್‌ಗೆ ಸುಪ್ರೀಂನಲ್ಲಿ ಹಿನ್ನಡೆ: ಇನ್ನೂ ಒಂದು ವರ್ಷ ಜೈಲು ವಾಸ ಅನಿವಾರ್ಯ..!

ನಟ ದರ್ಶನ್‌ಗೆ ಸುಪ್ರೀಂನಲ್ಲಿ ಹಿನ್ನಡೆ: ಇನ್ನೂ ಒಂದು ವರ್ಷ ಜೈಲು ವಾಸ ಅನಿವಾರ್ಯ..!

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ.

 

ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಸದ್ಯದ ಪರಿಸ್ಥಿತಿಯಲ್ಲಿ ಜಾಮೀನು ನೀಡಲು ನಿರಾಕರಿಸಿದ್ದು, ವಿಚಾರಣಾ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ.

 

ಈ ಆದೇಶದಿಂದಾಗಿ ದರ್ಶನ್ ಕನಿಷ್ಠ ಮುಂದಿನ ಒಂದು ವರ್ಷಗಳ ಕಾಲ ಅಂದರೆ, 2027ರ ಮೇ 15ರವರೆಗೆ ಕಾರಾಗೃಹದಲ್ಲೇ ಇರುವುದು ಅನಿವಾರ್ಯವಾಗಿದೆ.

 

​ನ್ಯಾಯಪೀಠದ ಕಠಿಣ ನಿಲುವು

​ನ್ಯಾಯಮೂರ್ತಿಗಳಾದ ಪರ್ದಿವಾಲಾ ಮತ್ತು ವಿಜಯ್ ಬಿಷ್ನೋಯಿ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ 272 ಸಾಕ್ಷಿಗಳಿದ್ದು, ಈವರೆಗೆ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಇಷ್ಟು ದೊಡ್ಡ ಮಟ್ಟದ ಸಾಕ್ಷ್ಯಗಳು ಬಾಕಿ ಇರುವಾಗ ಅರ್ಹತೆಯ ಆಧಾರದ ಮೇಲೆ ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.

 

​ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಪ್ರಾಸಿಕ್ಯೂಷನ್ ಪರ ವಕೀಲ ಸಿದ್ದಾರ್ಥ ಲೂತ್ರಾ ಅವರ ವಾದವನ್ನು ಆಲಿಸಿತು. 17 ಮಂದಿ ಆರೋಪಿಗಳ ಪರ ವಕೀಲರು ಒಬ್ಬೊಬ್ಬ ಸಾಕ್ಷಿಯ ಪಾಟಿಸವಾಲಿಗೂ 5-6 ದಿನ ತೆಗೆದುಕೊಳ್ಳುತ್ತಿರುವುದು ವಿಳಂಬಕ್ಕೆ ಕಾರಣ ಎಂದು ಲೂತ್ರಾ ನ್ಯಾಯಾಲಯದ ಗಮನಕ್ಕೆ ತಂದರು.

 

​ವಿಶೇಷ ಸೌಲಭ್ಯಕ್ಕೆ ನಕಾರ

​ಜೈಲಿನಲ್ಲಿ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ ಮತ್ತು ಕುಟುಂಬದವರನ್ನು ಭೇಟಿ ಮಾಡಲು ಕೇವಲ ಗ್ಲಾಸ್ ತಡೆಗೋಡೆ ಮೂಲಕ ಅವಕಾಶ ನೀಡಲಾಗುತ್ತಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಕ್ವಾರಂಟೈನ್ ಸೆಲ್ ಕೂಡ ಜೈಲಿನ ಒಂದು ಭಾಗವೇ. ಯಾವುದೇ ಆರೋಪಿಗೆ ವಿಶೇಷ ಸೌಲಭ್ಯ ನೀಡಬಾರದು ಎಂಬುದು ನಮ್ಮ ಆಶಯ. ಜೈಲು ಮ್ಯಾನ್ಯುಯಲ್ ಪ್ರಕಾರ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡಲು ಸೂಚಿಸುತ್ತೇವೆ ಎಂದರು.

 

​ಇಂದಿನಿಂದ (ಮೇ 15) ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಸಾಧ್ಯವಾದಲ್ಲಿ ಪ್ರತಿದಿನ (Daily Basis) ವಿಚಾರಣೆ ನಡೆಸಿ ಪ್ರಕ್ರಿಯೆ ವೇಗಗೊಳಿಸಬೇಕು.

​ಮರು ಅರ್ಜಿ ಅವಕಾಶ: ಒಂದು ವೇಳೆ ಒಂದು ವರ್ಷದ ಅವಧಿಯಲ್ಲಿ ವಿಚಾರಣೆಯಲ್ಲಿ ಯಾವುದೇ ಪ್ರಗತಿ ಕಾಣದಿದ್ದರೆ, ಅರ್ಜಿದಾರರು ಪುನಃ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

 

​ಇನ್-ಚಾರ್ಜ್ ಕೋರ್ಟ್‌ನಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಸೆಷನ್ಸ್ ಕೋರ್ಟ್‌ಗೆ ಪ್ರತ್ಯೇಕ ನ್ಯಾಯಾಧೀಶರನ್ನು ನಿಯೋಜಿಸಲು ಹೈಕೋರ್ಟ್‌ಗೆ ಸೂಚನೆ ನೀಡಲಾಗಿದೆ.

 

​ಒಟ್ಟು 272 ಸಾಕ್ಷಿಗಳ ಪೈಕಿ ಅತಿ ಪ್ರಮುಖವಾದ 60 ಸಾಕ್ಷಿಗಳ ವಿಚಾರಣೆಯನ್ನು ಮೊದಲ ಹಂತದಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು.

​ಒಟ್ಟಾರೆಯಾಗಿ ಸುಪ್ರೀಂ ಕೋರ್ಟ್‌ನ ಈ ಕಟ್ಟುನಿಟ್ಟಿನ ಆದೇಶವು ದರ್ಶನ್ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬಕ್ಕೆ ತೀವ್ರ ನಿರಾಸೆ ತಂದಿದ್ದು, ಕಾನೂನು ಹೋರಾಟವು ಈಗ ಪೂರ್ಣ ಪ್ರಮಾಣದ ಟ್ರಯಲ್ (ವಿಚಾರಣೆ) ಮೇಲೆ ಕೇಂದ್ರೀಕೃತವಾಗಲಿದೆ.