ಕೋಟ: ಕುಟುಂಬ ಕಲಹದ ಹಿನ್ನೆಲೆ ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಬ್ರಹ್ಮಾವರ ಸಮೀಪದ ಬಾಳಕುದ್ರು ಹಂಗಾರಕಟ್ಟೆಯ ರಕ್ತೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ದಾಮೋದರ (46) ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನದ ಅಮಲಿನಲ್ಲಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ನಾಲ್ಕು ದಿನಗಳ ಹಿಂದೆ ಪತ್ನಿ ಶೋಭಾಳಿಗೆ ಹಲ್ಲೆ ನಡೆಸಿ ಮೊಬೈಲ್ ಒಡೆದು ಹಾಕಿದ್ದ ಹಿನ್ನೆಲೆಯಲ್ಲಿ, ಪತ್ನಿ ಮಗನನ್ನು ಕರೆದುಕೊಂಡು ಮನೆ ಬಿಟ್ಟು ತೆರಳಿದ್ದಳು ಎನ್ನಲಾಗಿದೆ.
ಇದರಿಂದ ಮನನೊಂದು ದಾಮೋದರ ಅವರು ಮೇ 13ರಂದು ಬೆಳಿಗ್ಗೆ 10:30ರಿಂದ ಸಂಜೆ 4:00ರ ನಡುವಿನ ಅವಧಿಯಲ್ಲಿ ನೆರೆಮನೆಯ ಶಶಿಧರ ಅವರ ಮನೆಯ ಬಾವಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಬಾವಿಯೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮೃತರ ಸಂಬಂಧಿ ಜ್ಯೋತಿ ಅವರು ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




