ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ರೈಲು ಪ್ರಯಾಣದ ವೇಳೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮಹಾರಾಷ್ಟ್ರ ಮೂಲದ ಪದ್ಮಶೆಟ್ಟಿ (76) ಅವರ ಪುತ್ರ ಪ್ರಸಾದ್ ಸುಂದರ್ ಶೆಟ್ಟಿ (52) ಕಳೆದ ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಮುಂಬಯಿಯಿಂದ ಉಡುಪಿ ಬಾಳಿಗಾ ಆಸ್ಪತ್ರೆಗೆ ಬರುತ್ತಿದ್ದರು. ಚಿಕಿತ್ಸೆ ಬಳಿಕ ಕೆಮ್ತೂರಿನಲ್ಲಿರುವ ಮನೆಯಲ್ಲಿ ಕೆಲವು ದಿನಗಳು ಉಳಿದು ಬಳಿಕ ಮುಂಬಯಿಗೆ ಮರಳುತ್ತಿದ್ದರು ಎನ್ನಲಾಗಿದೆ.
ದಿನಾಂಕ 26/04/2026 ರಂದು ಸಂಜೆ 7 ಗಂಟೆಗೆ ಪನ್ವೇಲ್ ರೈಲ್ವೆ ನಿಲ್ದಾಣದಿಂದ ಟ್ರಿವೇಂಡ್ರಮ್ ವಿಶೇಷ ರೈಲಿನ ಮೂಲಕ ಉಡುಪಿಗೆ ಪ್ರಯಾಣ ಬೆಳೆಸಲಾಗಿತ್ತು. ಆದರೆ 27/04/2026 ರಂದು ಬೆಳಿಗ್ಗೆ 10:30ಕ್ಕೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಪ್ರಸಾದ್ ಸುಂದರ್ ಶೆಟ್ಟಿ ಅವರು ತಮ್ಮ ಸೀಟಿನಲ್ಲಿ ಕಾಣಿಸದೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸಂಬಂಧಿಕರು ಹಾಗೂ ಪೊಲೀಸರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





