ಮಣಿಪಾಲ: ಹಳೆ ಮನೆ ರಿಪೇರಿ ಮಾಡುವ ವೇಳೆ ಗೋಡೆ ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಉಡುಪಿ ನಿವಾಸಿ ಉಮೇಶ ನಾಯ್ಕ (54) ಎಂದು ಗುರುತಿಸಲಾಗಿದೆ. ಇವರು 80 ಬಡಗುಬೆಟ್ಟು ಗ್ರಾಮದ ಆದರ್ಶ ನಗರದಲ್ಲಿ ವಾಸವಾಗಿದ್ದರು.
ದಿನಾಂಕ 03/05/2026 ರಂದು ಸಂಜೆ ಸುಮಾರು 5:30 ಗಂಟೆಯ ವೇಳೆಗೆ ತಮ್ಮ ಹಳೆಯ ಮನೆಯ ರಿಪೇರಿ ಕಾಮಗಾರಿ ನಡೆಸುತ್ತಿದ್ದ ವೇಳೆ ಗೋಡೆ ಕುಸಿಯುವ ಲಕ್ಷಣ ಕಂಡು ಪಕ್ಕಕ್ಕೆ ಹಾರಿದ್ದಾರೆ. ಈ ಸಂದರ್ಭ ಕುಸಿದ ಗೋಡೆಯ ಕೆಳಗಿದ್ದ ಕಲ್ಲೊಂದು ಎದೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಬಾಯಿಯಿಂದ ಹಾಗೂ ಮೂಗಿನಿಂದ ರಕ್ತಸ್ರಾವ ಉಂಟಾಗಿದ್ದು, ಅವರನ್ನು ಚಿಕಿತ್ಸೆಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7:45 ಗಂಟೆಗೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





