ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಪರವಾನಿಗೆ ಇಲ್ಲದೇ ಲಾರಿಯಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಮಾಹಿತಿ ಮೇರೆಗೆ ಕೆಂಪು ಕಲ್ಲು ಮತ್ತು ಚಾಲಕನನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಂದ ಬಂಧನವಾದ ಚಾಲಕ ವಿನಯ ಎಂದು ಗುರುತಿಸಲಾಗಿದೆ.
ಪ್ರಕರಣದ ಸಾರಾಂಶ : ದಿನಾಂಕ 20/08/2025 ರಂದು ಜಯಕುಮಾರ್ , ಸಹಾಯಕ ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿ ಮೇರೆಗೆ ಹನೇಹಳ್ಳಿ ಗ್ರಾಮದ ಮಾಸ್ತಿನಗರ ಎಂಬಲ್ಲಿ ಹೋಗುತ್ತಿರುವಾಗ ಬೆಳಗ್ಗೆ 11:15 ಗಂಟೆಗೆ ಕೂರಾಡಿ ಕ್ರಾಸ್ ಜಂಕ್ಷನ್ ಕಡೆಯಿಂದ ಹನೆಹಳ್ಳಿ ಕಡೆಗೆ ಕೆಂಪು ಕಲ್ಲು ತುಂಬಿಸಿಕೊಂಡು ಬರುತ್ತಿದ್ದ KA-20-A-9525 ನಂಬ್ರದ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ ಲಾರಿಯ ಚಾಲಕನಾದ ಆರೋಪಿ ವಿನಯ ಯಾವುದೇ ಪರವಾನಿಗೆ ಹಾಗೂ ದಾಖಲಾತಿ ಇಲ್ಲದೆ ಆಲೂರಿನಿಂದ ಹನೆಹಳ್ಳಿಗೆ ಕೆಂಪು ಕಲ್ಲನ್ನು ಸಾಗಿಸುತ್ತಿರುವುದಾಗಿ ತಿಳಿಸಿದ್ದು ಅದರಂತೆ ಲಾರಿ ಹಾಗೂ ಕೆಂಪುಕಲ್ಲುಗಳನ್ನು ವಶಕ್ಕೆ ಪಡೆದು ಆರೋಪಿತ ಲಾರಿಯ ಚಾಲಕ ಹಾಗೂ ಮಾಲಕ ಯಾವುದೇ ಪರವಾನಿಗೆ ಹೊಂದದೇ, ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸಿದೇ ಸರಕಾರದ ಸೊತ್ತಾದ ಕೆಂಪು ಕಲ್ಲನ್ನು ಕಳ್ಳತನದಿಂದ ತೆಗೆದು, ಕಲ್ಲನು ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡು ಬಂದಿರುವುದಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 178/2025 ಕಲಂ: 4(1), 4(1A), 21(1) (2) MMRD ACT AND ಕಲಂ: 3(1), 42(1), 44 KMMC RULE 1944 AND US 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.