ಮಂಗಳೂರು : ಸಣ್ಣ ಪ್ರಾಯದಲ್ಲೇ ಹಲವಾರು ಉದ್ಯಮಗಳನ್ನು ಆರಂಭಿಸಿ ಮಂಗಳೂರಿನಲ್ಲಿ ಓರಗೆಯ ಗೆಳೆಯರ ನಡುವೆ ಹೆಸರು ಮಾಡಿದ್ದ ಯುವ ಉದ್ಯಮಿ ರಾಕೇಶ್ ಗ್ಲಾಡ್ಸನ್ ಡಿಸೋಜ (44) ಅಲ್ಪಕಾಲದ ಅಸೌಖ್ಯದ ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊಟ್ಟಾರದ ಇಮಾನ್ಯುವೆಲ್ ವಿಲ್ಲಾದ ನಿವಾಸಿಯಾಗಿದ್ದ ರಾಕೇಶ್ ಗ್ಲಾಡ್ಸನ್ ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಮೇ 1ರಂದು ಕೊನೆಯುಸಿರೆಳೆದಿದ್ದಾರೆ.
ರಾಕೇಶ್ ಅವರು ತಂದೆ ಸಿಪ್ರಿಯನ್ ಡಿಸೋಜ, ತಾಯಿ ಲೋರಾ ಡಿಸೋಜ, ಪತ್ನಿ ಡೆಲ್ಸಿ ಡಿಸೋಜ, ಮಗಳು ರಿಯಾ ಡಿಸೋಜ ಅವರನ್ನು ಅಗಲಿದ್ದಾರೆ.
ರಾಕೇಶ್ ಗ್ಲಾಡ್ಸನ್ ಅವರು ಮಂಗಳೂರಿನಲ್ಲಿ ಹೊಟೇಲ್, ಸೆಲೂನ್ ಮತ್ತು ಆರ್.ಎನ್ ಟ್ರಾವೆಲ್ಸ್ ಹೆಸರಿನಲ್ಲಿ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದರು. ಹಠಾತ್ ಎದುರಾದ ಸಾವು ಕುಟುಂಬಸ್ಥರು ಮತ್ತು ಗೆಳೆಯರಿಗೆ ಶಾಕ್ ನೀಡಿದೆ.





