*ಜ್ಯುವೆಲ್ಲರಿ ಮಳಿಗೆಯ ಗೋಡೆ ಕೊರೆದು 1.20 ಕೋಟಿ ಮೌಲ್ಯದ ಬೆಳ್ಳಿ ಎಗರಿಸಿ ಎಸ್ಕೇಪ್…*
ಬೆಂಗಳೂರು : ನಗರದಲ್ಲಿ ಬಂಗಾರ ಹಾಗೂ ಬೆಳ್ಳಿಯ ಬೆಲೆ ಗಗನಕ್ಕೇರುತ್ತಿದ್ದಂತೆ ಸಕ್ರಿಯವಾಗಿರುವ ಕಿರಾತಕ ಕಳ್ಳರ ತಂಡವೊಂದು, ಸಿನೆಮಾ ಶೈಲಿಯಲ್ಲಿ ಜ್ಯುವೆಲ್ಲರಿ ಮಳಿಗೆಯ ಗೋಡೆ ಕೊರೆದು ಕೋಟ್ಯಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ದಾಸರಹಳ್ಳಿಯ ಎಂಟನೇ ಮೈಲಿ ಬಳಿ ನಡೆದಿದೆ.
ದಾಸರಹಳ್ಳಿಯ ಹಾವನೂರಿನಲ್ಲಿರುವ ‘ಎಂಬಿ ಜ್ಯುವೆಲ್ಲರ್ಸ್’ (MB Jewellers) ಮಳಿಗೆಯೇ ಕಳ್ಳರ ಕೆಂಗಣ್ಣಿಗೆ ಗುರಿಯಾದ ಸ್ಥಳ. ಕಳೆದ ಎರಡು ದಿನಗಳ ಹಿಂದೆ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದ ಕಳ್ಳರು, ಮಳಿಗೆಯ ಹಿಂಭಾಗದ ಕೊಠಡಿಯ ಬೀಗವನ್ನು ಮೊದಲು ಮುರಿದಿದ್ದಾರೆ.
ಬಳಿಕ ಮಳಿಗೆಯ ಭದ್ರತಾ ಗೋಡೆಯನ್ನು ಅತ್ಯಂತ ಜಾಗರೂಕತೆಯಿಂದ ಕೊರೆದು ಒಳಪ್ರವೇಶಿಸಿದ್ದಾರೆ. ಮಳಿಗೆಯ ಒಳನುಗ್ಗಿದ ದುಷ್ಕರ್ಮಿಗಳು ಅಂದಾಜು 70 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ಅಪಹರಿಸಿದ್ದಾರೆ. ಕಳುವಾದ ಈ ಒಟ್ಟು ಮೌಲ್ಯ ಸುಮಾರು 1.20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಳ್ಳತನದ ಸುದ್ದಿ ತಿಳಿಯುತ್ತಿದ್ದಂತೆ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಗೋಡೆ ಕೊರೆಯಲು ಬಳಸಿದ ತಂತ್ರಜ್ಞಾನ ಹಾಗೂ ಉಪಕರಣಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲಾಗುತ್ತಿದೆ. ಮಳಿಗೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಂಕಿತರ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ಕಳ್ಳರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ನಡೆಸಲಾಗುತ್ತಿದೆ.
ನಗರದ ಜನನಿಬಿಡ ಪ್ರದೇಶಗಳಲ್ಲೇ ಇಂತಹ ಬೃಹತ್ ಕಳ್ಳತನಗಳು ವರದಿಯಾಗುತ್ತಿರುವುದು ಜ್ಯುವೆಲ್ಲರಿ ಮಾಲೀಕರಲ್ಲಿ ದಿಗಿಲು ಹುಟ್ಟಿಸಿದೆ. ಬೆಲೆಬಾಳುವ ಲೋಹಗಳ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕಳ್ಳರು ಇಂತಹ ಹೈಟೆಕ್ ಕಳ್ಳತನಕ್ಕೆ ಇಳಿಯುತ್ತಿರುವುದು ಪೋಲಿಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.





