ಬೆಂಗಳೂರು : ನಗರದಲ್ಲಿ ವಿವಾಹಿತೆಯ ಮೋಹಕ್ಕೆ ಬಿದ್ದು, ಬ್ಲ್ಯಾಕ್‌ಮೇಲ್‌ಗೆ ಸಿಲುಕಿದ್ದ 28 ವರ್ಷದ ಜಿಮ್ ಟ್ರೈನರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.
ದಿಲೀಪ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದುಬಂದಿದೆ.
ನೆಲಮಂಗಲ ತಾಲೂಕಿನ ವಾಜರಹಳ್ಳಿಯ ನಿವಾಸಿಯಾಗಿದ್ದ ದಿಲೀಪ್ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದರು. ಇವರು ಕೆಲಸ ಮಾಡುತ್ತಿದ್ದ ಜಿಮ್‌ಗೆ ಫಿಟ್ನೆಸ್‌ಗಾಗಿ ಬರುತ್ತಿದ್ದ ಯೋಗಿತಾ ಎಂಬ ಮಹಿಳೆಯ ಪರಿಚಯವಾಗಿತ್ತು. ಈ ಪರಿಚಯ ಸಲುಗೆಗೆ ತಿರುಗಿ ಇಬ್ಬರ ನಡುವೆ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ. ಒಂದು ವರ್ಷದ ಹಿಂದೆಯೇ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ಸುಖಾಂತ್ಯಗೊಂಡಿತ್ತು. ಆದರೂ ಕೂಡ ಯೋಗಿತಾ, ದಿಲೀಪ್ ಬೆನ್ನು ಬಿಡದೆ ಬ್ಲಾಕ್‌ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ದಿಲೀಪ್ ನೇಣಿಗೆ ಶರಣಾಗುವ ಮುನ್ನ ಯೋಗಿತಾಳಿಗೆ ವಿಡಿಯೋ ಕಾಲ್ ಮಾಡಿದ್ದ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಯೋಗಿತಾ, ದಿಲೀಪ್ ಸಹೋದರಿಗೆ ಇನ್‌ಸ್ಟಾಗ್ರಾಮ್ ಮೂಲಕ ವಿಷಯ ತಿಳಿಸಿದ್ದಾಳೆ.
ತಕ್ಷಣ ಕುಟುಂಬಸ್ಥರು ರೂಮಿನ ಬಾಗಿಲು ಮುರಿದು ನೋಡಿದಾಗ ದಿಲೀಪ್ ನೇಣಿನ ಕುಣಿಕೆಯಲ್ಲಿ ಒದ್ದಾಡುತ್ತಿದ್ದರು. ತಕ್ಷಣ ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





