ಸುರತ್ಕಲ್ : ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲುಕಿ ದ್ವಿಚಕ್ರವಾಹನದ ಸಹ ಸವಾರೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಂ.ಆರ್.ಪಿ.ಎಲ್. ಕಾರ್ಗೋ ಗೇಟ್ ಬಳಿ ನಡೆದಿದೆ.
ಉತ್ತರ ಕನ್ನಡ ಮೂಲದ ಪ್ರಸ್ತುತ ಕಾಟಿಪಳ್ಳ ಕೈಕಂಬದಲ್ಲಿ ವಾಸವಿರುವ ಶ್ವೇತಾ (20) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಬೈಕ್ ಚಲಾಯಿಸುತ್ತಿದ್ದ ಅವರ ಸಹೋದರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಶ್ವೇತಾ ಅವರು ತನ್ನ ಸಹೋದರನ ಬೈಕ್ ನಲ್ಲಿ ಕಾಟಿಪಳ್ಳ ಕೈಕಂಬದಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಸಂದರ್ಭ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಅಡಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯ ಹೊಟ್ಟೆಯ ಮೇಲ್ಬಾಗದಿಂದ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿಯಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


