Home Crime ನಿಟ್ಟೆ ಕಾಲೇಜಿನ ಬಳಿ ಭೀಕರ ಅಪಘಾತ : ಬೈಕಿಗೆ ಕಾರು ಡಿಕ್ಕಿಯಾಗಿ ತಂದೆ ಮೃತ್ಯು, ಮಗಳು...

ನಿಟ್ಟೆ ಕಾಲೇಜಿನ ಬಳಿ ಭೀಕರ ಅಪಘಾತ : ಬೈಕಿಗೆ ಕಾರು ಡಿಕ್ಕಿಯಾಗಿ ತಂದೆ ಮೃತ್ಯು, ಮಗಳು ಗಂಭೀರ…!!

ಕಾರ್ಕಳ : ನಿಟ್ಟೆ ಕಾಲೇಜಿನ ಬಳಿ ಶುಕ್ರವಾರ ಸಂಜೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.

ತಂದೆ ಮಗಳು ಪ್ರಯಾಣಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ತಂದೆ ಮೃತಪಟ್ಟು,ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿಟ್ಟೆ ಗ್ರಾಮದ ಬಜಕಳ ನಿವಾಸಿ ನವೀನ್ ಚಂದ್ರ ಮೂಲ್ಯ(47) ಮೃತ ಬೈಕ್ ಸವಾರ, ಅವರ ಮಗಳು ಪ್ರೇರಣಾ ಗಂಭೀರವಾಗಿ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ನವೀನ್‌ಚಂದ್ರ ಮೂಲ್ಯರವರು ಸಿಇಟಿ ಪರೀಕ್ಷೆ ಬರೆದು ಬಸ್ಸಿನಲ್ಲಿ ಬಂದ ಮಗಳನ್ನು ಬೈಕಿನಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ನಿಟ್ಟೆ ಕಾಲೇಜು ಬಳಿಯ ಪೆಟ್ರೋಲ್ ಬಂಕ್ ಬಳಿಯ ಬಜಕಳ ಕ್ರಾಸ್ ಬಳಿ ಕಾರ್ಕಳ ಕಡೆಯಿಂದ ನಿಟ್ಟೆ ಕಡೆಗೆ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ನವೀನ್‌ಚಂದ್ರ ಅವರ ಬೈಕಿಗೆ ಅಪ್ಪಳಿಸಿ ಈ ದುರ್ಘಟನೆ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ನವೀನ್‌ಚಂದ್ರ ಮೂಲ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪ್ರೇರಣಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.

ಅಪಘಾತದ ತಾಣವಾಗುತ್ತಿದೆ ನಿಟ್ಟೆ ಕಾಲೇಜು ಪರಿಸರ! ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿನ ನಿಟ್ಟೆ ಕಾಲೇಜು ಪರಿಸರದಲ್ಲಿ ಪದೇಪದೇ ಇಂತಹ ಭೀಕರ ಅಪಘಾತ ಸಂಭವಿಸುತ್ತಲೇ ಇವೆ. ಪ್ರಮುಖವಾಗಿ ಈ ಭಾಗದಲ್ಲಿ ಯುವಕರು ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿರುವ ಹಿನ್ನಲೆಯಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೊಲೀಸರು ಅಪಘಾತಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.