ಕಾರ್ಕಳ: ಕಸಬಾ ಗ್ರಾಮದ ನಿವಾಸಿ ಶಂಕರ ಕುಲಾಲ್ (49) ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಶಂಕರ ಕುಲಾಲ್ ಅವರು ಏಪ್ರಿಲ್ 23ರಂದು ಬೆಳಿಗ್ಗೆ 9.10ಕ್ಕೆ ಮನೆಗೆ ಬೀಗ ಹಾಕಿ ಅಯ್ಯಪ್ಪನಗರಕ್ಕೆ ಕೆಲಸಕ್ಕೆ ತೆರಳಿದ್ದರು. ಬಳಿಕ ಏಪ್ರಿಲ್ 24ರಂದು ಸಂಜೆ 6.00ಕ್ಕೆ ಮನೆಗೆ ವಾಪಾಸು ಬಂದಾಗ, ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಯಾರೋ ಅಪರಿಚಿತರು ಯಾವುದೋ ಸಾಧನದಿಂದ ಮೀಟಿ ತೆರೆದು ಒಳನುಗ್ಗಿರುವುದು ಕಂಡುಬಂದಿದೆ.
ಮನೆಯಲ್ಲಿ ಕೋಣೆಯ ಕಪಾಟಿನೊಳಗೆ ಇಟ್ಟಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್-1, 3 ಗ್ರಾಂ ತೂಕದ ಚಿನ್ನದ ಉಂಗುರಗಳು-3, 3 ಗ್ರಾಂ ತೂಕದ ಬೆಂಡೋಲೆ-1 ಜೋಡಿ, 3 ಗ್ರಾಂ ತೂಕದ ಜುಮ್ಕಿ-1 ಜೋಡಿ ಸೇರಿದಂತೆ ಒಟ್ಟು ಸುಮಾರು ₹2,64,000 ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





