Home Crime ಬೋಟ್‌ ರಿಪೇರಿ ವೇಳೆ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವು

ಬೋಟ್‌ ರಿಪೇರಿ ವೇಳೆ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವು

ಗಂಗೊಳ್ಳಿ, ಜೂ.30: ಬೋಟ್‌ ರಿಪೇರಿ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

ಮೃತರನ್ನು ಗುಜ್ಜಾಡಿ ನಿವಾಸಿ ಗಣೇಶ ರಾಮಕೃಷ್ಣ ಆಚಾರಿ (43) ಎಂದು ಗುರುತಿಸಲಾಗಿದೆ.

ಪತ್ನಿ ಸುಮಂಗಲಾ ಆಚಾರಿ (38) ನೀಡಿದ ದೂರಿನ ಪ್ರಕಾರ, ಜೂನ್ 20ರಂದು ಮಧ್ಯಾಹ್ನ ಸುಮಾರು 12:30ಕ್ಕೆ ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರಸ್ತೆಯಲ್ಲಿರುವ ಮಂಜುನಾಥ ಖಾರ್ವಿ ಅವರ ಬೋಟ್‌ನಲ್ಲಿ ಮರದ ರಿಪೇರಿ ಕೆಲಸ ಮಾಡುತ್ತಿದ್ದ ವೇಳೆ ಗಣೇಶ ರಾಮಕೃಷ್ಣ ಆಚಾರಿ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ತಲೆಯ ಹಿಂಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ, ವೈದ್ಯರ ಸಲಹೆಯಂತೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಜೂನ್ 29ರಂದು ಮಧ್ಯಾಹ್ನ ಸುಮಾರು 12:45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಗಣೇಶ ರಾಮಕೃಷ್ಣ ಆಚಾರಿ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.