ಉಡುಪಿ : ಕಂಬಳ ಕೂಟದ ಅತ್ಯಂತ ಜನಪ್ರಿಯ, ಅತಿ ಹೆಚ್ಚು ಪ್ರಶಸ್ತಿ ವಿಜೇತ ಪಟ್ಟಿಯಲ್ಲಿ ಅಗ್ರಗಣ್ಯ ಎನ್ನಿಸಿಕೊಂಡಿದ್ದ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ ‘ಚೆನ್ನ’ ಎಂಬ ಹೆಸರಿನ ಕೋಣ ಅಸುನೀಗಿದೆ.
ಸುಮಾರು 25 ವರ್ಷ ಪ್ರಾಯದ ಚೆನ್ನ ಕಳೆದ ಮೂರು ವರ್ಷದಿಂದ ವಿಶ್ರಾಂತಿಯಲ್ಲಿದ್ದ. ಇದೀಗ ವಯೋಸಹಜ ಅನಾರೋಗ್ಯದಿಂದ ಸಾವಿನ ಕದ ತೆರೆದಿದ್ದಾನೆ. ನಿನ್ನೆ ಸಂಜೆ ಚೆನ್ನನ ಅಂತ್ಯಸಂಸ್ಕಾರ ನಡೆದಿದೆ. ಸುಮಾರು 22 ವರ್ಷಗಳ ಹಿಂದೆ ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಆ ಕೋಣವನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ಅವರು ತಮ್ಮಲ್ಲಿಗೆ ಕರೆ ತಂದು ಮುದ್ದಿನಿಂದ ಸಾಕಿದ್ದರು. ಬಳಿಕ ಕಂಬಳಕ್ಕಾಗಿ ಚೆನ್ನನನ್ನು ಅಣಿಗೊಳಿಸಿದ್ದರು. ಮೂಡಬಿದಿರೆಯ ಕೋಟಿ-ಚೆನ್ನಯ ಕಂಬಳದ ಗದ್ದೆಗಿಳಿದ ಮೊದಲ ಮೂರು ವರ್ಷವೂ ನೇಗಿಲು ಜೂನಿಯರ್ ವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟರಿಗೆ ಚೆನ್ನ ಮೆಡಲ್ ಬಾಚಿಕೊಟ್ಟಿತು.
ನಂತರ ಸೀನಿಯರ್ ಆಗಿ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟರ ಹಟ್ಟಿಗೆ ತೆರಳಿತು. ತುಸು ತುಂಟ ಪೋಕುರಿಯ ಕೋಣನಾದ್ದರಿಂದ ಕಂಬಳ ಓಟ ಆರಂಭವಾಗುವ ಸಮಯದಲ್ಲಿಯೂ ಪೋಕರಿ ಮಾಡುತ್ತಿತ್ತು. ಇದೇ ಕಾರಣಕ್ಕೆ ಸೀನಿಯರ್ ವಿಭಾಗದಲ್ಲಿ ಒಂದು ವರ್ಷ ನೇಗಿಲು ವಿಭಾಗದಲ್ಲಿ ಚೆನ್ನನನ್ನು ಓಡಿಸಲಾಯಿತು. ಬಳಿಕ ಬಂಟ್ವಾಳದ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ಟಿ ಅವರು ಚೆನ್ನನಿಗೆ ತನ್ನ ಕೋಣವನ್ನು ಜತೆ ಮಾಡಿದ್ದರು. ಆಗಲೇ ಅಲ್ಲಿಪಾದೆ ವಿನ್ಸೆಂಟ್ ಅವರು ಚೆನ್ನನಿಗೆ ಪ್ರೀತಿಯಿಂದ ಆರೈಕೆ ಮಾಡಿ ಕಂಬಳದ ಪಾಠ ಹೇಳಿಕೊಟ್ಟರು. ಅದೇ ವರ್ಷದ ನೇಗಿಲು ಹಿರಿಯ ವಿಭಾಗದಲ್ಲಿ ಚೆನ್ನ ಚಾಂಪಿಯನ್ ಆಗಿ ಹೊರಮ್ಮಿದ್ದನು.
