ಬ್ರಹ್ಮಾವರ: ಬೈಕಾಡಿ ಗ್ರಾಮದ ಬೈಕಾಡ್ತಿ ಅಮ್ಮನವರ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಾಬಗಿ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಅಲ್ಲಿದ್ದ ಕೆಲವರು ಕೋಳಿಗಳನ್ನು ಹಿಡಿದು ಪರಾರಿಯಾಗಲು ಯತ್ನಿಸಿದರೂ, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ವಿಜಯ್ (50) ಉಡುಪಿ ಬನ್ನಂಜೆ, ಸ್ಟೀವನ್ (35) ಬೈಕಾಡಿ ಗ್ರಾಮ ಹಾಗೂ ದಿವಾಕರ ಶೆಟ್ಟಿ (50) ಬೈಕಾಡಿ ಗ್ರಾಮ ಎಂದು ಗುರುತಿಸಲಾಗಿದೆ.
ಸ್ಥಳದಿಂದ 6 ಕೋಳಿಗಳು, ಒಂದು ಬಾಳ್, ಬಾಳ್ ಕಟ್ಟಲು ಬಳಸಿದ ಹಗ್ಗದ ತುಂಡು ಹಾಗೂ ಕೋಳಿ ಅಂಕಕ್ಕೆ ಬಳಸಲಾಗಿದ್ದ ₹1,500 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 131/2026ರಡಿ ಕೆ.ಪಿ. ಕಾಯ್ದೆಯ ಕಲಂ 87, 93 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕಲಂ 11ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.




