ಉಡುಪಿ ಜಿಲ್ಲೆಯ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಏಪ್ರಿಲ್ 23ರಿಂದ ಮೇ 14ರವರೆಗೆ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹಾರಥೋತ್ಸವ ಭಕ್ತಿಭಾವದಿಂದ ನಡೆಯಲಿದೆ.
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ದೇವಸ್ಥಾನವನ್ನು 33 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಕಾಷ್ಠ-ಶಿಲಾಮಯವಾಗಿ ಪುನರ್‌ನಿರ್ಮಿಸಲಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 23ರಂದು ದಿವ್ಯಾಭರಣಗಳ ಶೋಭಾಯಾತ್ರೆ ಹಾಗೂ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಏಪ್ರಿಲ್ 29 ಮತ್ತು 30ರಂದು ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ನೆರವೇರಲಿದೆ.
ಮೇ 2 ಮತ್ತು 3ರಂದು ಬ್ರಹ್ಮಕುಂಭಾಭಿಷೇಕಗಳು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿವೆ. ಈ ಅವಧಿಯಲ್ಲಿ ನಿತ್ಯ ಯಾಗಗಳು, ಪೂಜೆಗಳು, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶೋಭಾಯಾತ್ರೆಗಳು, ಧಾರ್ಮಿಕ ಸಭೆಗಳು ಹಾಗೂ ಭಕ್ತಿಗೀತೆಗಳ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ದೇಶ-ವಿದೇಶಗಳಿಂದ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಮೇ 2ರಂದು ಮಹಾರಥೋತ್ಸವ, ಮೇ 4ರಂದು ಲಕ್ಷದೀಪೋತ್ಸವ ಹಾಗೂ ಮೇ 12ರಂದು ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 23ರಿಂದ ಮೇ 4ರವರೆಗೆ ಹಾಗೂ ಮೇ 12ರಂದು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಮೊಕ್ತೇಸರರು ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





