Home Crime ಸಿಂಗಾಪುರದ ಕಂಪೆನಿಯಿಂದ ಮಣಿಪಾಲದ ಕಂಪೆನಿಗೆ 33 ಕೋಟಿ ರೂ. ವಂಚನೆ : ಪ್ರಕರಣ ದಾಖಲು…!!

ಸಿಂಗಾಪುರದ ಕಂಪೆನಿಯಿಂದ ಮಣಿಪಾಲದ ಕಂಪೆನಿಗೆ 33 ಕೋಟಿ ರೂ. ವಂಚನೆ : ಪ್ರಕರಣ ದಾಖಲು…!!

ಮಣಿಪಾಲ : ಸಿಂಗಾಪುರದ ಕಂಪೆನಿಯೊಂದು ಮಣಿಪಾಲ ಕಂಪೆನಿಗೆ 33 ಕೋಟಿ ರೂ. ಹಣ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಲಿಪ್ ಆರ್.ಅಡಿಗ (35) ಎಂಬವರು ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿ ಎಮ್.ಎನ್.ಶೆಟ್ಟಿ ಟೆಕ್ನಾಲಜಿ ಪ್ರವೈಟ್ ಲಿಮಿಟೆಡ್ ಕಂಪೆನಿಯನ್ನು ನಡೆಸಿಕೊಂಡಿದ್ದರು.

ಸಿಂಗಾಪುರ ಕಂಪೆನಿಯೊಂದರ ಸಿಇಓ ಆನಂದರಾವ್ ಎಂಬವರು ದೀಲಿಪ್ ಗೆ ಕರೆ ಮಾಡಿ ಕಂಪನಿಯಲ್ಲಿ ತಯಾರಾಗುವ ಸಿಎಂಎಸ್ ಪ್ರೋಡೆಕ್ಟ್‌ನ್ನು ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು.

ದೀಲಿಪ್ ಹೇಳಿದ ವ್ಯಾಲ್ಯೂಶೆನ್ ಪಟ್ಟಿಯನ್ನು ಇಮೇಲ್ ಮುಖಾಂತರ ನೋಡಿ 2019ರ ಜೂನ್‌ನಲ್ಲಿ 35ಲಕ್ಷ ರೂ. ನಗದು ಹಾಗೂ ಸಿಂಗಾಪುರ ಕಂಪನಿಯ 17.5 ಲಕ್ಷ ಶೇರ್‌ಗಳನ್ನು ನೀಡುವುದಾಗಿ ಆನಂದ ರಾವ್ ತಿಳಿಸಿದ್ದನು.

ಈ ಶೇರ್ ಮೂರು ವರ್ಷದ ಬಳಿಕ 33 ಕೋಟಿ ಆಗಲಿದ್ದು ಕಂಪನಿಯ ಶೇರ್ 3 ವರ್ಷದಲ್ಲಿ 9 ಸಾವಿರ ಕೋಟಿ ಆಗುವುದಾಗಿ ಸುಳ್ಳು ಮಾಹಿತಿಯನ್ನು ನೀಡಿದ್ದನು.

2020ರ ಎಪ್ರಿಲ್‌ನಲ್ಲಿ ಶೇರ್ ತೆಗೆದುಕೊಳ್ಳುವ ಅಗ್ರಿಮೆಂಟ್ ಕಳುಹಿಸಿ ಕೊಟ್ಟಿದ್ದು ಅಗ್ರಿಮೆಂಟ್‌ನಂತೆ ಇವರು ವ್ಯವಹಾರ ಮಾಡಿಕೊಂಡಿದ್ದರು. ಈ ಅಗ್ರಿಮೆಂಟಿನಲ್ಲಿ ವ್ಯವಹಾರ ಆಗುವಾಗ ಸಿಂಗಾಪುರದ ಕಂಪನಿಯಲ್ಲಿ 35 ಮಿಲಿಯನ್ ಶೇರ್ ಇತ್ತು ಎಂಬುವುದಾಗಿ ಸುಳ್ಳು ಮಾಹಿತಿಯನ್ನು ನಮೂದಿಸಲಾಗಿತ್ತು.

ಈ ಅಗ್ರಿಮೆಂಟ್‌ಗೆ ದೀಲಿಪ್ ಹಾಗೂ ಆನಂದ ರಾವ್ ಸಹಿ ಮಾಡಿದ್ದರು. ಅಗ್ರಿಮೆಂಟ್ ಆದ ಬಳಿಕ ಕಂಪನಿಯವರು ಹೇಳಿದಂತೆ ದೀಲಿಪ್ ಪ್ರೋಡೆಕ್ಟನ್ನು ಅವರಿಗೆ ಕಳುಹಿಸಿದ್ದರು.

2023ರ ಎ.6ರಂದು ಅಗ್ರಿಮೆಂಟ್ ಪ್ರಕಾರ ಮಾಡಿಕೊಂಡ ಒಪ್ಪಂದವು 3 ವರ್ಷಕ್ಕೆ ಮುಗಿದಿದ್ದು. ಅದರ ಪ್ರಕಾರ ವ್ಯಾಲ್ಯೂಷನ್ ವರದಿಯನ್ನು ನೀಡುವಂತೆ ಇ-ಮೇಲ್ ಮೂಲಕ ಕೋರಿಕೊಂಡಿದ್ದರು. ಆನಂದ ರಾವ್ ಕಂಪನಿಯ ಶೇರ್ ಪಾಲುದಾರರಾದ ಶ್ಯಾಮ್‌ದೀಪ್ ಎಂಬವರಿಗೆ 2024ರ ಅ.6ರಂದು ಇ-ಮೇಲ್ ಮುಖಾಂತರ ಒಂದು ಮಾಹಿತಿಯನ್ನು ಕಳುಹಿಸಿದ್ದು ಆ ಮಾಹಿತಿಯಲ್ಲಿ ಒಪ್ಪಂದದ ಬಗ್ಗೆ ಧೃಡಪಡಿಸಿದ್ದರು.

ಅಲ್ಲದೇ ಪೋನ್ ಮೂಲಕ ಶ್ಯಾಮ್‌ದೀಪ್‌ಗೆ ವೀರಪ್ಪನ್ ಸುಬ್ರಹ್ಮಣ್ಯ ಅವರಿಂದ ಆನಂದ್ ರಾವ್ ಪೋನ್ ಮಾಡಿಸಿ 6.9 ಕೋಟಿ ನಗದು ಮತ್ತು 20 ಲಕ್ಷ ಶೇರ್‌ನ್ನು ನೀಡುವುದಾಗಿ ತಿಳಿಸಿದ್ದರು.

ಆನಂದರಾವ್, ಕಂಪನಿಯ ಚೇರ್ಮೆನ್ ಪೀಟರ್ ಜಪ್ರೀ ಜರ್ಮೈನ್ ಹಾಗೂ ಸಿ.ಟಿ.ಓ ರಾಘವೇಂದ್ರ ಅಗರವಾಲ, ನಿರ್ದೇಶಕರಾದ ಸ್ಮಿತಾ ಶಾಹು ಮತ್ತು ಕಂಪನಿ ಬೋರ್ಡ್ ಸದಸ್ಯರಾದ ಅಸುತೋಷ್ ಶ್ರೀವತ್ಸವ ಸೇರಿಕೊಂಡು ದೀಲಿಪ್ ಕಂಪನಿಯಲ್ಲಿ ವ್ಯವಹಾರ ಮಾಡುವಂತೆ ನಂಬಿಸಿ ಕಂಪನಿಯಿಂದ ಬರಬೇಕಾದ 33 ಕೋಟಿ ರೂ. ಹಣವನ್ನು ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.