Home Latest ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಲೆಯಾಳಂನ ಕಿರುತೆರೆ ನಟ ಸಿದ್ದಾರ್ಥ್ ವೇಣುಗೋಪಾಲ್ ನಿಧನ…!!

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಲೆಯಾಳಂನ ಕಿರುತೆರೆ ನಟ ಸಿದ್ದಾರ್ಥ್ ವೇಣುಗೋಪಾಲ್ ನಿಧನ…!!

ಕೊಚ್ಚಿ : ಮಲಯಾಳಂ ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ವೇಣುಗೋಪಾಲ್ (41) ಅವರು ದೀರ್ಘಕಾಲದ ಕ್ಯಾನ್ಸರ್ ಕಾಯಿಲೆಯಿಂದ ಶನಿವಾರದಂದು ನಿಧನರಾದರು.

ಕಳೆದ ಎರಡು ವರ್ಷಗಳಿಂದ ಈ ಮಾರಕ ಕಾಯಿಲೆಯ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ತ್ರಿಶೂರ್ ಜಿಲ್ಲೆಯ ಚಾಲಕುಡಿಯವರಾದ ಸಿದ್ದಾರ್ಥ್, ‘ಕಸ್ತೂರಿಮಾನ್’ ಮತ್ತು ‘ಭಾಗ್ಯಜಾತಕಂ’ ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಮನೆಮಾತಾಗಿದ್ದರು.

ನಟನೆಯ ಜೊತೆಗೆ ಅವರು ನಿರೂಪಕರಾಗಿಯೂ ಕಿರುತೆರೆ ವಲಯದಲ್ಲಿ ಚಿರಪರಿಚಿತರಾಗಿದ್ದರು. ಅವರ ಅನಾರೋಗ್ಯದ ಸಮಯದಲ್ಲಿ ಹಿರಿಯ ನಟಿ ಸೀಮಾ ಜಿ. ನಾಯರ್ ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಚಿಕಿತ್ಸೆಗಾಗಿ ಸಕ್ರಿಯವಾಗಿ ಬೆಂಬಲ ನೀಡಿದ್ದರು.

ಸಿದ್ದಾರ್ಥ್ ಅವರ ನಿಧನದ ಸುದ್ದಿಯನ್ನು ಹಂಚಿಕೊಂಡ ನಟಿ ಸೀಮಾ, “ನಿನ್ನನ್ನು ಉಳಿಸಿಕೊಳ್ಳಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ, ನೋವಿಲ್ಲದ ಲೋಕಕ್ಕೆ ಪಯಣಿಸಿದ್ದೀಯಾ” ಎಂದು ಭಾವನಾತ್ಮಕವಾಗಿ ಕಂಬನಿ ಮಿಡಿದಿದ್ದಾರೆ.

ಮೃತರು ತಾಯಿ ಮತ್ತು ಕಿರಿಯ ಸಹೋದರನನ್ನು ಅಗಲಿದ್ದಾರೆ. ಇಂದು ಸಂಜೆ ಅವರ ಸ್ವಗ್ರಾಮವಾದ ಚಾಲಕುಡಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪ್ರತಿಭಾವಂತ ನಟನ ಅಗಲಿಕೆಗೆ ದಕ್ಷಿಣ ಭಾರತದ ಕಿರುತೆರೆ ಲೋಕ ತೀವ್ರ ಶೋಕ ವ್ಯಕ್ತಪಡಿಸಿದೆ.