ಬೆಂಗಳೂರು : ನಗರದಲ್ಲಿ ಅಕ್ರಮ ಸಂಬಂಧದ ವಿಚಾರವಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ.
ನಗರದ ವಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. ನಾಗರಾಜ್ ಹಾಗೂ ಅವರ ಮಗ ಲೋಕೇಶ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ರಾತ್ರಿ ಸುಮಾರು 10 ಗಂಟೆ ವೇಳೆಗೆ ಮಹಿಳೆಯ ಮನೆಯ ಸಮೀಪ ಈ ದಾಳಿ ನಡೆದಿದ್ದು, ಆರೋಪಿಗಳು ಮಹಿಳೆಯನ್ನು ಎಳೆದಾಡಿ ಕಲ್ಲುಗಳಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯ ಹೇಳಿಕೆಯ ಪ್ರಕಾರ, ಅಕ್ರಮ ಸಂಬಂಧದ ಬಗ್ಗೆ ತಾನೇ ಯಾರಿಗೂ ಮಾಹಿತಿ ನೀಡಿರಲಿಲ್ಲ. ಸಂಬಂಧಪಟ್ಟ ವ್ಯಕ್ತಿಯ ಪತ್ನಿ ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ನೀಡಿದ್ದಾಗಿ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ತಂದೆ-ಮಗ ಏಕಾಏಕಿ ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ಎರಡೂ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.





