ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಬಸ್ಸೊಂದು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಆ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಪಾದಚಾರಿ ಕೊಪ್ಪಳ ನಿವಾಸಿ ಅಮರೇಶ್ ಎಂದು ತಿಳಿಯಲಾಗಿದೆ.
ಈ ಅಪಘಾತದ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ಸಾರಾಂಶ : ಕೊಪ್ಪಳದ ನಿವಾಸಿಯಾದ ಅಮರೇಶ್ (24) ದಿನಾಂಕ: 06-08-2025 ರಂದು ರಾತ್ರಿ 9.10 ಗಂಟೆಯ ಸುಮಾರಿಗೆ ಕಾಪುವಿನ K1 ಹೋಟೆಲ್ ನಲ್ಲಿ ಪಾರ್ಸೆಲ್ ನ್ನು ತೆಗೆದುಕೊಂಡು ಹೋಟೆಲ್ ಎದುರಿನ NH-66 ಉಡುಪಿ- ಮಂಗಳೂರು ಏಕಮುಖ ರಸ್ತೆಯನ್ನು ದಾಟಿ, ಮಂಗಳೂರು-ಉಡುಪಿ ರಸ್ತೆಯನ್ನು ದಾಟುತ್ತಾ ಪಶ್ಚಿಮದ ಅಂಚನ್ನು ತಲುಪಿ ಮಂಗಳೂರು ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ 9.13 ಗಂಟೆಗೆ ಅದೇ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ GA 08 V 5760 ನೇ ಆನಂದ ಟ್ರಾವೆಲ್ಸ್ ಬಸ್ಸು ಚಾಲಕ ಎಂ. ದುರ್ಗಾಪ್ರಸಾದ್ ರವರು ಬಸ್ಸನ್ನು ಅತೀ ವೇಗವಾಗಿ, ತೀವ್ರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಮರೇಶ್ ರವರಿಗೆ ಢಿಕ್ಕಿ ಹೊಡೆದು ಅಪಘಾತಪಡಿಸಿ ಸ್ವಲ್ಪ ದೂರದವರೆಗೆ ಎಳೆದುಕೊಂಡು ಬಂದು ರಸ್ತೆಯ ಪಶ್ಚಿಮ ಬದಿಯಲ್ಲಿನ ಮರವೊಂದಕ್ಕೆ ಢಿಕ್ಕಿ ಹೊಡೆದಿರುತ್ತದೆ. ಫಿರ್ಯಾದಿ ದುರುಗಜ್ಜರ ಅಭಿ, ಪ್ರಾಯ: 24 ವರ್ಷ ಕೂಡ್ಲಿಗೆ ತಾಲೂಕು, ಬಳ್ಳಾರಿ ಇವರು ಕೂಡಲೇ ಓಡಿಕೊಂಡು ಆ ಸ್ಥಳಕ್ಕೆ ಹೋಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರೊಂದಿಗೆ ಬಸ್ಸಿನ ಟೈರ್ ಕೆಳಗಡೆ ಸಿಕ್ಕಿಬಿದ್ದಿದ್ದ ಅಮರೇಶ್ ರವರನ್ನು ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಅವರ ತಲೆಗೆ ಗಂಭೀರವಾದ ಗಾಯವಾಗಿ ಪ್ರಜ್ಞೆ ತಪ್ಪಿರುತ್ತದೆ. ಬಳಿಕ ಸ್ಥಳಕ್ಕೆ ಒಂದು ಅಂಬುಲೆನ್ಸ್ ನ್ನು ಬರಮಾಡಿಕೊಂಡು ಗಾಯಗೊಂಡ ವ್ಯಕ್ತಿಯನ್ನು ಅಂಬುಲೆನ್ಸ್ ನಲ್ಲಿ ಹಾಕಿ ಬಸ್ಸಿನ ಚಾಲಕನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದು, ಗಾಯಾಳುವನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತನನ್ನು ಪರೀಕ್ಷಿಸಿದ ವೈಧ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ರಾತ್ರಿ 10.05 ಗಂಟೆಗೆ ವೈಧ್ಯರು ತಿಳಿಸಿರುವ ವಿಚಾರವನ್ನು ಹಾಗೂ ಆ ಸಮಯದಲ್ಲಿ ಬಸ್ಸಿನ ಚಾಲಕನು ಅಲ್ಲಿಂದಲೇ ಓಡಿ ಹೋಗಿರುವ ವಿಚಾರವನ್ನು ಬಸ್ಸಿನ ಇನ್ನೋರ್ವ ಸಿಬ್ಬಂದಿಯಾದ ಮಲ್ಲಿಕಾರ್ಜುನ ಎಸ್ ರವರಿಂದ ಫಿರ್ಯಾದುದಾರರರಿಗೆ ತಿಳಿದುಬಂದಿರುತ್ತದೆ. ಈ ಅಪಘಾತಕ್ಕೆ GA 08 V 5760 ನೇ ಆನಂದ ಟ್ರಾವೆಲ್ಸ್ ಬಸ್ಸಿನ ಚಾಲಕ ಎಂ. ದುರ್ಗಾಪ್ರಸಾದ್ ರವರ ಅತೀವೇಗ, ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 100/2025 ಕಲಂ: 281, 106(1) BNS ನಂತೆ ಪ್ರಕರಣ ದಾಖಲಾಗಿರುತ್ತದೆ.