Home Latest ಡಾ. ಕೆ. ಗೋವಿಂದ ಭಟ್ ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ : ಡಾ.ಗೋವಿಂದ ಭಟ್...

ಡಾ. ಕೆ. ಗೋವಿಂದ ಭಟ್ ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ : ಡಾ.ಗೋವಿಂದ ಭಟ್ ಇಂದಿನ ಕಲಾವಿದರಿಗೆ ಮಾದರಿ, ಆದರ್ಶಪ್ರಾಯರು : ಡಾ.ತಲ್ಲೂರು…!!

ಉಡುಪಿ : ಸುದೀರ್ಘ ಕಾಲ ಕಲಾ ಸೇವೆಯನ್ನು ಮಾಡಿದ ಡಾ.ಕೆ.ಗೋವಿಂದ ಭಟ್ ಅವರಿಗಿದ್ದ ಯಕ್ಷಗಾನದ ಮೇಲಿನ ಪ್ರೀತಿ, ಕಲಾರಾಧನೆಯೇ ಅವರನ್ನು ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗುವಂತೆ ಮಾಡಿದೆ. ಕಲಾವಿದ ಹೇಗೆ ಇರಬೇಕು ಎನ್ನುವುದಕ್ಕೆ ಗೋವಿಂದ ಭಟ್ ಇಂದಿನ ಕಲಾವಿದರಿಗೆ ಮಾದರಿಯಾಗಿದ್ದಾರೆ, ಆದರ್ಶಪ್ರಾಯರಾಗಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಬಂಟ್ವಾಳ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ಸೋಮವಾರ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ನಡೆದ ಇತ್ತೀಚಿಗೆ ಅಗಲಿದ ಯಕ್ಷಗಾನದ ಮೇರುನಟ ಡಾ.ಕೆ.ಗೋವಿಂದ ಭಟ್ ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ‘ಗೋವಿಂದ ಸ್ಮರಣೆ ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಕೆ.ಗೋವಿಂದ ಭಟ್ ಅವರೊಡನೆ ಸುಮಾರು 40 ವರ್ಷಗಳ ಪರಿಚಯವಿದೆ. ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಗೋವಿಂದ ಭಟ್ ಅವರ ವೇಷವನ್ನು ಒಳಗೊಂಡ ಯಕ್ಷ ಸಪ್ತಾಹ ‘ಗೋವಿಂದ ವೈಭವ’ ಕಾರ್ಯಕ್ರಮ ನಡೆದಾಗ ಅದರ ಅಧ್ಯಕ್ಷತೆ ವಹಿಸುವ ಅವಕಾಶ ಲಭಿಸಿತ್ತು. ಮೃದು ಮಾತಿನ ಈ ಮೇರು ನಟ, ವೇಷ ಹಾಕಿ ರಂಗಸ್ಥಳಕ್ಕೆ ಬಂದರೆoದರೆ ಅವರದ್ದು ಕಂಚಿನ ಕಂಠ. ಮೈಕ್‌ನಲ್ಲಿ ಆ ಸ್ವರ ಕೇಳಿಯೇ ಗೋವಿಂದ ಭಟ್ ಅವರ ರಂಗ ಪ್ರವೇಶವಾಗಿದೆ ಎಂಬುದು ನಮಗೆ ತಿಳಿಯುತ್ತಿತ್ತು. ಅವರ ವೇಷ ನೋಡಿಯೇ ಬಡಗುತಿಟ್ಟಿನಿಂದ ತೆಂಕುತಿಟ್ಟಿನ ಕಡೆ ಅಭಿಮಾನ ಬೆಳೆಸಿದ ಅಸಂಖ್ಯ ಅಭಿಮಾನಿಗಳಿದ್ದಾರೆ ಎಂದು ಅವರು ಹೇಳಿದರು.

ಡಾ.ಗೋವಿಂದ ಭಟ್ ಅವರು ತನ್ನ ಕಷ್ಟಕಾರ್ಪಣ್ಯಗಳನ್ನು ಸಮಾಜದ ಮುಂದೆ ಬಿಚ್ಚಿಡದೆ ಸುದೀರ್ಘ ಕಾಲ ಕಲಾಸೇವೆ ಮಾಡಿದ್ದಾರೆ. ಇಂತಹ ಮೇರು ನಟನಿಗೆ ಕೇಂದ್ರದ ಪದ್ಮಶ್ರೀ ಪುರಸ್ಕಾರ ಸಿಗುವ ನಿರೀಕ್ಷೆಯಿತ್ತು. ಆದರೆ ಅದು ಕೈಗೂಡದಿರುವುದು ಬೇಸರ ತಂದಿದೆ. ಅವರಿಗೆ ಸಿಕ್ಕಿದಷ್ಟು ಗೌರವ ಇನ್ನಾವ ಕಲಾವಿದನಿಗೂ ಸಿಕ್ಕಿಲ್ಲ. ಕಾರಣ ಅವರಲ್ಲಿರುವ ಕಲೆಯನ್ನು ಜನ ಗುರುತಿಸಿ ಮನ್ನಣೆ ನೀಡಿದ್ದಾರೆ. ಅವರ ಕಂಚಿನ ಕಂಠದ ಕಲಾವಿದನನ್ನು ಕಳೆದುಕೊಂಡು ಯಕ್ಷಗಾನ ಕ್ಷೇತ್ರ ಬಡವಾಗಿದೆ ಎಂದು ಅವರು ನುಡಿ ನಮನ ಸಲ್ಲಿಸಿದರು.

ಹಿರಿಯ ಯಕ್ಷಗಾನ ವಿಮರ್ಶಕ ಡಾ. ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನದ ದಶಾವತಾರಿ ಎಂದೇ ಖ್ಯಾತರಾದ ಡಾ.ಗೋವಿಂದ ಭಟ್ ಅವರು ಹಲವಾರು ದಾಖಲೆಯನ್ನು ನಿರ್ಮಿಸಿದವರು. ರಾಷ್ಟ್ರಪತಿ ಕೋವಿಂದ್ ಅವರಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿರುವುದು ಉಜ್ವಲವಾದ ಕಲಾ ದಾಖಲೆಯಾಗಿದೆ. 71 ವರ್ಷಗಳ ಕಾಲ ನಿರಂತರ ತಿರುಗಾಟ ನಡೆಸಿರುವುದು, ವೇಷ ವೈವಿಧ್ಯ, ಅವರು ನಿರ್ವಹಿಸಿದ ಪಾತ್ರಗಳು ಒಂದು ದಾಖಲೆಯೇ ಆಗಿವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕೊಳ್ಯೂರು ರಾಮಚಂದ್ರ ರಾವ್, ವಿದ್ವಾನ್ ಪಂಜ ಭಾಸ್ಕರ ಭಟ್, ಆರ್.ಕೆ.ಭಟ್ ಬೆಳ್ಳಾರೆ, ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.