ಕೋಲಾರ: ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಕೆಜಿಎಫ್ ಪೊಲೀಸರು ಬಂಧಿಸಿದ್ದಾರೆ.
ರಾಬರ್ಟಸನ್‌ಪೇಟೆ ಡಾನ್ ಬಾಸ್ಕೋ ಐಟಿಐ ಬಳಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಹುಲ್ ದ್ರಾವಿಡ್ (26) ಎಂಬಾತನನ್ನು ರಾಬರ್ಟಸನ್‌ಪೇಟೆ ಪೊಲೀಸರು ಬಂಧಿಸಿ, ಆತನಿಂದ 215 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಜಿಎಫ್-ಕುಪ್ಪಂ ಮುಖ್ಯರಸ್ತೆಯ ಚೆನ್ನಾಗನಹಳ್ಳಿ ಕ್ರಾಸ್ ಬಳಿಯ ರೋಜರ್ಸ್ ಕ್ಯಾಂಪ್ ಬಳಿಯ ತಂಗುದಾಣದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಶೇಖರ್ (41) ಆಲಿಯಾಸ್ ನಾಯಿ ಶೇಖರ್ ಎಂಬಾತನನ್ನು ಆಂಡರಸನ್‌ಪೇಟೆ ಪೊಲೀಸರು ಬಂಧಿಸಿ, ಆತನಿಂದ 250 ಗ್ರಾಂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಊರಿಗಾಂ ಪೊಲೀಸರು ಎಲೆಕ್ಟ್ರಿಕಲ್ ಲೈನ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬ್ರಿನ್ ಕ್ಲಿಂಟನ್ ಎಂಬುವನನ್ನು ಬಂಧಿಸಿ, ಆತನಿಂದ 169 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವುದು, ಉತ್ಪಾದನೆ ಮಾಡುವುದು, ಸಂಗ್ರಹ ಮಾಡುವುದು ಅಪರಾಧ. ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ.
ಇಂತಹ ಕೃತ್ಯಗಳನ್ನು ನಡೆಸುವವರನ್ನು ಬಂಧಿಸಿ, ಗಡಿಪಾರು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಎಚ್ಚರಿಕೆ ನೀಡಿದ್ದಾರೆ.
ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರನ್ನು ಬಂಧಿಸುವಲ್ಲಿ ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಮಾರ್ಕೊಂಡಯ್ಯ, ಅನಿಲ್ ಕುಮಾರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಮಹೇಶ್ ಮಾಲಿ, ಮಂಜುನಾಥ್, ಚಂದ್ರಶೇಖರ್, ಕೃಷ್ಣಮೂರ್ತಿ ಮತ್ತು ತಂಡದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





