ಪುಣೆ : ಅಕ್ರಮ ಸಂಬಂಧಕ್ಕೆ ಹೆತ್ತ ತಾಯಿಯೇ ಪ್ರಿಯಕರನ ಜೊತೆ ಸೇರಿ ತನ್ನ ಆರು ವರ್ಷದ ಮಗನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತಾಲೂಕಿನ ಕುರುಳಿ ಗ್ರಾಮದಲ್ಲಿ ನಡೆದಿದೆ.
ಪುಣೆ ಜಿಲ್ಲೆಯ ಖೇಡ್ ನಿವಾಸಿಯಾದ ಬೈಸ್ರಾನ್ ಮೆಹಬೂಬ್ ಶೇಖ್ (27) ಎಂಬಾಕೆ ಕಳೆದ 10 ವರ್ಷಗಳಿಂದ ಪತಿಯಿಂದ ದೂರವಿದ್ದಳು.
ಈಕೆಯು ತನ್ನ ಪತಿಯ ಗೆಳೆಯ ಹಾಗೂ ಕ್ಯಾಬ್ ಚಾಲಕನಾದ ರಾಮ್ ವಿನಾಯಕ್ ಕಜೆವಾಡ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದು, ಇಬ್ಬರು ತಂದೆಯ ಬಳಿ ವಾಸವಿದ್ದರು. ಆದರೆ 6 ವರ್ಷದ ಬಾಲಕ ಅವೇಜ್ ಮಾತ್ರ ತಾಯಿಯ ಆರೈಕೆಯಲ್ಲಿದ್ದನು.
ತಮ್ಮ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದಾನೆಂದು ಭಾವಿಸಿದ ಈ ಇಬ್ಬರು ಆರೋಪಿಗಳು, ಏಪ್ರಿಲ್ ಮೊದಲ ವಾರದಲ್ಲಿ ರಾತ್ರಿ 11:30 ರ ಸುಮಾರಿಗೆ ಬಾಲಕನನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾರೆ. ನೀರು ತುಂಬಿದ ಬಕೆಟ್‌ನಲ್ಲಿ ಬಾಲಕನ ತಲೆಯನ್ನು ಬಲವಂತವಾಗಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಮಗ ಸತ್ತಿದ್ದಾನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಆತನ ದೇಹವನ್ನು ನೆಲಕ್ಕೆ ಬಡಿದಿರುವ ಭಯಾನಕ ಸತ್ಯ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಬೈಸ್ರಾನ್, ಮಗನ ಶವವನ್ನು ಬೀಡ್ ಜಿಲ್ಲೆಯಲ್ಲಿರುವ ತನ್ನ ತವರೂರಿಗೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲಿ ತನ್ನ ಪೋಷಕರಿಗೆ ಮಗ ‘ಹೃದಯಾಘಾತ’ದಿಂದ ಮೃತಪಟ್ಟಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದಾಳೆ. ಆದರೆ ಅಂತ್ಯಕ್ರಿಯೆಯ ಸಮಯದಲ್ಲಿ ಬಾಲಕನ ಅಜ್ಜ ದೇಹದ ಮೇಲಿದ್ದ ಹಲ್ಲೆಯ ಗುರುತುಗಳನ್ನು ಕಂಡು ಸಂಶಯಗೊಂಡು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಪರಳಿ ಪೊಲೀಸರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನ ಶ್ವಾಸಕೋಶದಲ್ಲಿ ನೀರು ಪತ್ತೆಯಾಗಿದ್ದು, ಇದು ಕೊಲೆ ಎಂದು ದೃಢಪಟ್ಟಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತಾಯಿ ಬೈಸ್ರಾನ್ಳನ್ನು ಬಂಧಿಸಿದ್ದು, ನ್ಯಾಯಾಲಯವು ಏಪ್ರಿಲ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ವಿಚಾರಣೆ ವೇಳೆ ಆಕೆ ಪ್ರಿಯಕರನ ಪ್ರಚೋದನೆಯಿಂದ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ತಲೆಮರೆಸಿಕೊಂಡಿರುವ ಪ್ರಿಯಕರ ರಾಮ್ ಕಜೆವಾಡ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.





