ಕಾರ್ಕಳ, ಏ.11: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸೂಡ ಗ್ರಾಮದ ಓರಿಯಂಟಲ್ ಗ್ರಾನೈಟ್ ಕ್ರಷರ್‌ನಲ್ಲಿ ಎಂ.ಸ್ಯಾಂಡ್ ಲೋಡ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಟಿಪ್ಪರ್ ಚಾಲಕರ ನಡುವೆ ಜಗಳ ಉಂಟಾಗಿ, ಹಲ್ಲೆ ನಡೆದ ಘಟನೆ ವರದಿಯಾಗಿದೆ.
ಏಪ್ರಿಲ್ 10 ರಂದು ಶಿವಮೊಗ್ಗ ಮೂಲದ ಕನಕ ವಿ (39) ಅವರು ಟಿಪ್ಪರ್ ನಲ್ಲಿ ಎಂ.ಸ್ಯಾಂಡ್ ತುಂಬಿಸಲು ಸರದಿಯಲ್ಲಿ ನಿಲ್ಲಿಸಿ ಟೋಕನ್ ನಂ.10 ಪಡೆದಿದ್ದರು. ಅವರಿಗಿಂತ ಮುಂದೆ ಇದ್ದ ಟೋಕನ್ ನಂ.1 ಹಾಗೂ 3ರಿಂದ 9ರವರೆಗೆ ಟಿಪ್ಪರ್‌ಗಳಿಗೆ ಲೋಡ್ ಮಾಡಿ ತೆರಳಲಾಗಿತ್ತು.
ಈ ವೇಳೆ ಟೋಕನ್ ನಂ.2 ಪಡೆದಿದ್ದ ಟಿಪ್ಪರ್ ಚಾಲಕ ಸ್ಥಳದಲ್ಲಿರದ ಕಾರಣ, ಕನಕ ವಿ ಅವರು ತಮ್ಮ ವಾಹನವನ್ನು ಲೋಡ್ ಮಾಡಲು ಮುಂದಾದರು. ಇದಕ್ಕೆ ಆಕ್ರೋಶಗೊಂಡ ಟೋಕನ್ ನಂ.2 ಟಿಪ್ಪರ್ ಚಾಲಕ ಹರೀಶ್, ತನ್ನ ಮಾಲಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬಳಿಕ ವಾಗ್ವಾದಕ್ಕೆ ಇಳಿದಿದ್ದಾನೆ ಎನ್ನಲಾಗಿದೆ
ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಲಕನ ಸೀಟಿನಿಂದ ಕೆಳಗೆ ಎಳೆದು, ಮುಷ್ಠಿಯಿಂದ ಎದೆ, ತಲೆ ಹಾಗೂ ಕೆನ್ನೆಗೆ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಜಾಯ್ ಕ್ರಷರ್ ನಲ್ಲಿ ಈ ಹಿಂದೆ ಕೊಡ ಹೊಡೆದಾಟ ನಡೆದಿತ್ತು.ಯಾವಾಗಲೂ ನಡೆಯುತ್ತ ಇರುತ್ತದೆ. ಕೇರಳದ ಲಾರಿ ಹಾಗೂ ಚಾಲಕರು ಬಂದ ನಂತರ ಇಲ್ಲಿ ಜಗಳ ಹೆಚ್ಚುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಜಾಯ್ ಕ್ರಷರ್ ನಲ್ಲಿ ಅಕ್ರಮವಾಗಿ ಕೂಡ ವ್ಯವಹಾರ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






