ರಾಯಚೂರು : ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಖ್ಯಾಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಈ-ಖಾತೆ ಪ್ರಕ್ರಿಯೆ ಪೂರ್ಣಗೊಳಿಸಲು 2 ಲಕ್ಷ ರೂ ಬೇಡಿಕೆ ಇಟ್ಟಿದ್ದ ಅಧಿಕಾರಿ, ಮೊದಲ ಹಂತವಾಗಿ 1 ಲಕ್ಷ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಾಹಿತಿಯ ಪ್ರಕಾರ, ರಾಘವೇಂದ್ರ ರೆಡ್ಡಿ ಎಂಬ ವ್ಯಕ್ತಿಯಿಂದ ಈ-ಖಾತೆ ಮಾಡಿಕೊಡುವ ಹೆಸರಿನಲ್ಲಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ₹2 ಲಕ್ಷ ಲಂಚ ಕೇಳಿದ್ದರೆಂದು ಆರೋಪಿಸಲಾಗಿದೆ. ಅದರಂತೆ ಮುಂಗಡವಾಗಿ ₹1 ಲಕ್ಷ ನೀಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ಹಿಡಿಯಲು ಮುಂದಾದರು.
ದಾಳಿ ನಡೆಯುತ್ತಿರುವುದು ಗೊತ್ತಾಗುತ್ತಿದ್ದಂತೆ ಸುರೇಶ್ ಶೆಟ್ಟಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಿರವಾರದಿಂದ ಕವಿತಾಳ ಕಡೆಗೆ ವಾಹನದಲ್ಲಿ ಪರಾರಿಯಾಗಲು ಪ್ರಯತ್ನಿಸಿದರೆಂದು ತಿಳಿದುಬಂದಿದೆ.
ಆದರೆ ಸಿನಿಮೀಯ ಶೈಲಿಯ ಕಾರು ಚೇಸ್ ಮೂಲಕ ಲೋಕಾಯುಕ್ತ ತಂಡ ಅಧಿಕಾರಿಯನ್ನು ಬೆನ್ನಟ್ಟಿಕೊಂಡು ಬಂಧಿಸಿದೆ.





