ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ಬಳಿ ವೃದ್ಧೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ವೃದ್ಧೆಯನ್ನು ಬಾದಾಮಿ ಮೂಲದ ಮುಲ್ಕಿಯಲ್ಲಿ ವಾಸ್ತವ್ಯವಿರುವ ಫಕೀರವ್ವ (90)ಎಂದು ಗುರುತಿಸಲಾಗಿದೆ
ಮೃತ ಫಕೀರವ್ವ ಕಳೆದ ಹಲವಾರು ವರ್ಷಗಳಿಂದ ಮುಲ್ಕಿಯಲ್ಲಿ ನೆಲೆಸಿದ್ದು ರಾತ್ರಿ ಹೊತ್ತು ಪಂಚಮಲ್ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕಟ್ಟಡ ಒಂದರ ಎದುರು ಬದಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ
ಮಾಜೀ ನಪಂ ಸದಸ್ಯ ಹರ್ಷ ರಾಜ ಶೆಟ್ಟಿ,ಮುಲ್ಕಿ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಳಿಕ ಅಗ್ನಿಶಾಮಕ ದಳ ಆಗಮಿಸಿ ಮೃತ ದೇಹವನ್ನು ಬಾವಿಯಿಂದ ತೆರವುಗೊಳಿಸಿದ್ದಾರೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಧಾನ ಗತಿಯ ಕಟ್ಟಡ ಕಾಮಗಾರಿ
ಕಳೆದ ಹಲವಾರು ವರ್ಷಗಳಿಂದ ಈ ಪರಿಸರದಲ್ಲಿ ಕಟ್ಟಡದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರತಿ ಮಳೆಗಾಲದಲ್ಲಿ ಕಟ್ಟಡದ ಕೆಳಭಾಗದಲ್ಲಿ ಮಳೆನೀರು ನಿಲ್ಲುತ್ತಿದ್ದು , ಸ್ಥಳೀಯರು ಮುಲ್ಕಿ ನಗರ ಪಂಚಾಯಿತಿಗೆ ದೂರು ನೀಡಿ ಕಟ್ಟಡದ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದರು, ಅದೇ ರೀತಿ ಕಟ್ಟಡದ ಎದುರು ಭಾಗದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಬಾವಿ ಕಾಮಗಾರಿ ನಡೆಯುತ್ತಿದ್ದು ಮಹಿಳೆ ಆಕಸ್ಮಿಕವಾಗಿ ಬಾವಿಗೆ ಕಾಲು ಜಾರಿ ಬಿದ್ದು ಮೃತರಾಗಿರುವ ಬಗ್ಗೆ ಸ್ಥಳೀಯರಲ್ಲಿ ಸಂಶಯ ಉಂಟಾಗಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.












