ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಕಾನೂನು ಬಾಹಿರವಾಗಿ ಕೋಳಿ ಅಂಕ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸುವಾಗ ಅಲ್ಲಿ ಇದ್ದ ಎಲ್ಲರು ಪರಾರಿಯಾಗಿದ್ದಾರೆ.
ಕಾಪು ಪೊಲೀಸರು ಕೋಳಿ ಅಂಕಕ್ಕೆ ಬಳಸಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಪೊಲೀಸರು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಂಶ : ದಿನಾಂಕ 21/07/2025 ರಂದು ತೇಜಸ್ವಿ ಟಿ.ಐ, ಪಿ.ಎಸ್.ಐ ಕಾಪು ಪೊಲೀಸ್ ಠಾಣೆ.ರವರು ಸಂಜೆ ಠಾಣೆಯಲ್ಲಿದ್ದ ಸಮಯ 18:00 ಗಂಟೆಗೆ ಬಾತ್ಮಿದಾರರೊಬ್ಬರು ಕರೆ ಮಾಡಿ, ಉಳಿಯಾರಗೋಳಿ ಗ್ರಾಮದ ಕೈಪುಂಜಾಲಿನ ಬೊಬ್ಬರ್ಯ ದೈವಸ್ಥಾನದ ಹತ್ತಿರ ಬೀಚ್ ಬದಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಸೇರಿಕೊಂಡು ಕೋಳಿಗಳ ಕಾಲುಗಳಿಗೆ ಬಾಳು (ಚಿಕ್ಕ ಕತ್ತಿ)ಗಳನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿರಿಸಿ ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿರುವುದಾಗಿ ಮಾಹಿತಿ ನೀಡಿದಂತೆ ಪಿ.ಎಸ್.ಐ ರವರು ಠಾಣಾ ಸಿಬ್ಬಂದಿಗಳಾದ ಉಮೇಶ, ಮರಿಗೌಡ, ಹರೀಶ್ ಬಾಬು ಮತ್ತು ಲೋಕೇಶ, ಚಾಲಕ ಜಗದೀಶ ರವರೊಂದಿಗೆ ಇಲಾಖಾ ಜೀಪು KA-20 G-0352 ನೇದರಲ್ಲಿ ಹೊರಟು ಕೈಪುಂಜಾಲು ತಲುಪಿ ಅಲ್ಲಿದ್ದ ಪ್ರತೀಕ್ ಮತ್ತು ಕಾರ್ತಿಕ್ ಎಸ್ ಎಂಬವರಿಗೆ ನೋಟೀಸು ನೀಡಿ ದಾಳಿ ಸಮಯದಲ್ಲಿ ಪಂಚಾಯತುದಾರರಾಗಿ ಬರಮಾಡಿಕೊಂಡು ಅವರನ್ನು ಜೊತೆಯಲ್ಲಿ ಕರೆದುಕೊಂಡು ಮಾಹಿತಿ ಬಂದ ಸ್ಥಳದ ಹತ್ತಿರಕ್ಕೆ ಹೋಗಿ ನೋಡಲಾಗಿ ಕೈಪುಂಜಾಲು ಬೊಬ್ಬರ್ಯ ದೈವಸ್ಥಾನದ ಬಳಿಯ ಬೀಚ್ ಸಮೀಪದ ಖಾಲಿ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಕೋಳಿಗಳ ಕಾಲುಗಳಿಗೆ ಬಾಳುಗಳನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಸ್ಥಳಕ್ಕೆ ಬಂದ ಬಾತ್ಮಿದಾರರು, ಅವರಲ್ಲಿ ಒಬ್ಬನು ಉಳಿಯಾರಗೋಳಿ ಗ್ರಾಮದ ವಿಜ್ಜು @ ವಿಜಯ ಎಂದೂ, ಮತ್ತೊಬ್ಬನು ಫಣಿಯೂರಿನ ಅನಿಲ್ ಕುಮಾರ್ ಎಂದೂ ತಿಳಿಸಿದ್ದು, ಉಳಿದವರ ಪರಿಚಯ ಇರುವುದಿಲ್ಲ ಎಂದೂ ಹೇಳಿರುತ್ತಾರೆ. ಪಿ.ಎಸ್.ಐ ರವರು ಸಿಬ್ಬಂದಿಯವರು ಪಂಚಾಯತುದಾರರ ಜೊತೆ ಸ್ಥಳಕ್ಕೆ 18:30 ಗಂಟೆಗೆ ದಾಳಿ ನಡೆಸಿದ್ದು ಪಿ.ಎಸ್.ಐ ಹಾಗೂ ಸಿಬ್ಬಂದಿಯವರನ್ನು ಜೂಜಾಡುತ್ತಿದ್ದ ಜನರು ನೋಡಿ ಅಲ್ಲಿದ್ದ ಕೋಳಿಗಳು ಮತ್ತು ಬಾಳುಗಳ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾರೆ. ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿದರೂ ಆರೋಪಿತರು ಸಿಗದೆ ಅಲ್ಲಿಂದ ಪರಾರಿಯಾಗಿರುತ್ತಾರೆ. ಪಂಚರ ಸಮಕ್ಷಮದಲ್ಲಿ ಸ್ಥಳದ ಮಹಜರು ನಡೆಸಿ ಸ್ಥಳದಲ್ಲಿದ್ದ ಸತ್ತ ಹುಂಜ-1, ಗಾಯಗೊಂಡ ಜೀವಂತ ಹುಂಜ-1 ಮತ್ತು ಕೈ ಚೀಲ-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 95/2025 ಕಲಂ: 11 (1) (a) (n) Prevention of Cruelty to Animals Act. ಮತ್ತು 87 K P Act ರಂತೆ ಪ್ರಕರಣ ದಾಖಲಾಗಿರುತ್ತದೆ.
