ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸರಣಿ ಹತ್ಯೆಗಳು ಮತ್ತು ನೂರಾರು ಮೃತದೇಹಗಳನ್ನು ಹೂತಿರುವ ಪ್ರಕರಣದ ಪೊಲೀಸ್ ತನಿಖೆಯ ಕುರಿತು ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನಿಖಾಧಿಕಾರಿಯ ಅನುಭವದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಅವರು, ತನಿಖೆಗೆ ಸೂಕ್ತ ಮತ್ತು ಸಮರ್ಥ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿರುವ ಈ ಘಟನೆಯು “ಅಪರೂಪದಲ್ಲಿ ಅಪರೂಪದ” ಪ್ರಕರಣವಾಗಿದ್ದು, ಕಳೆದ 100 ವರ್ಷಗಳಲ್ಲಿ ನ್ಯಾಯಾಲಯದ ಗಮನಕ್ಕೆ ಇಂತಹ ಘಟನೆ ಬಂದಿರಲಿಕ್ಕಿಲ್ಲ ಎಂದು ಕೆ.ವಿ. ಧನಂಜಯ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.
ಇಂತಹ ಪ್ರಕರಣವನ್ನು ಅನುಭವಿ ಮತ್ತು ಸಮರ್ಥ ಪೊಲೀಸ್ ಅಧಿಕಾರಿಯಿಂದಲೇ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪ್ರಸ್ತುತ ಪ್ರಕರಣದ ತನಿಖಾಧಿಕಾರಿಯಾಗಿರುವ ಸಬ್ ಇನ್ಸ್‌ಪೆಕ್ಟರ್ ಕೇವಲ 29 ವರ್ಷದವರಾಗಿದ್ದು, ಅವರು ಈ ಹಿಂದೆ ಇಂತಹ ಎಷ್ಟು ಪ್ರಕರಣಗಳನ್ನು ಭೇದಿಸಿದ್ದಾರೆ? ಎಂದು ಕೆ.ವಿ. ಧನಂಜಯ ಪ್ರಶ್ನಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸೂಕ್ತ ಕಾರ್ಯಾನುಭವ ಹೊಂದಿರುವ ತನಿಖಾಧಿಕಾರಿಯ ಅಗತ್ಯವಿದೆ ಎಂದು ಹೇಳಿದ್ದಾರೆ.