ಬೆಂಗಳೂರು; ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಅಪ್‌ಲೋಡ್ ಮಾಡಿದ್ದ ಯೂಟ್ಯೂಬರ್ ಸಮೀರ್ ಮೊಹಮ್ಮದ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ಶವಗಳನ್ನು ಹೂಳಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಒಳಗೊಂಡ ವಿಡಿಯೋವೊಂದನ್ನು ಸಮೀರ್ ಮೊಹಮ್ಮದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ದೇವಸ್ಥಾನದ ಘನತೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ, ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ (ಸೆಕ್ಷನ್ 153A) ಮತ್ತು ಸಾರ್ವಜನಿಕ ಶಾಂತಿ ಕದಡುವ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿತ್ತು.
ಸಮೀರ್ ಮೊಹಮ್ಮದ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, “ಅರ್ಜಿದಾರರು ಕೇವಲ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯದ ಬಗ್ಗೆ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಯಾವುದೇ ಸಮುದಾಯಗಳ ನಡುವೆ ದ್ವೇಷ ಉಂಟುಮಾಡುವ ಉದ್ದೇಶವಿಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿದೆ” ಎಂದು ವಾದಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೇಲ್ನೋಟಕ್ಕೆ ಬಲವಾದ ಪುರಾವೆಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಯಾವುದೇ ನಿರ್ದಿಷ್ಟ ಸಮುದಾಯಗಳ ನಡುವೆ ದ್ವೇಷ ಅಥವಾ ಸಂಘರ್ಷಕ್ಕೆ ಪ್ರಚೋದನೆ ನೀಡಿದ ಅಂಶಗಳು ಈ ವಿಡಿಯೋದಲ್ಲಿ ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಮುಂದಿನ ತನಿಖೆ ಮತ್ತು ಕಾನೂನು ಕ್ರಮಗಳಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ. ಈ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ಹಕ್ಕುಗಳ ಬಗ್ಗೆ ಮಾತನಾಡುವವರಿಗೆ ಮತ್ತು ಯೂಟ್ಯೂಬರ್‌ಗಳಿಗೆ ದೊಡ್ಡ ಸಮಾಧಾನ ತಂದಿದೆ.





