ಅಜೆಕಾರು: ಸೊರಬ ತಾಲೂಕು ಸಮನವಳ್ಳಿ ಗ್ರಾಮದ ದರ್ಶನ (23) ಅವರ ತಂದೆ ಹನುಮಂತಪ್ಪ (50) ಅವರು ನಾಪತ್ತೆಯಾಗಿರುವ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರ್ಶನ ಅವರು ನೀಡಿದ ದೂರಿನ ಪ್ರಕಾರ, ಹನುಮಂತಪ್ಪ ಅವರು ಮರ್ಣೆ ಗ್ರಾಮದ ಕಾಡುಹೊಳೆ ಜನಪ್ರೀಯ ರೈಸ್ ಮಿಲ್‌ನಲ್ಲಿ ಕೆಲಸ ಮಾಡಿಕೊಂಡು ಮಗನೊಂದಿಗೆ ಅಲ್ಲಿಯೇ ವಾಸವಾಗಿದ್ದರು. ದಿನಾಂಕ 25/03/2026 ರಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಉಡುಪಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದರು.
ಮಾರ್ಚ್ 26 ರಂದು ಮೊಬೈಲ್‌ಗೆ ಕರೆ ಮಾಡಿದಾಗ ಉಡುಪಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆದರೆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಂತರ ಯಾವುದೇ ಸಂಪರ್ಕವಾಗಿಲ್ಲ.
ಸಂಬಂಧಿಕರು ಮತ್ತು ಪರಿಚಿತರಲ್ಲಿ ಹುಡುಕಾಟ ನಡೆಸಿದರೂ ಅವರ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಹೀಗಾಗಿ ದರ್ಶನ ಅವರು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ‘ಗಂಡಸು ಕಾಣೆ’ ಪ್ರಕರಣ ದಾಖಲಿಸಲಾಗಿದೆ.
ಚಹರೆ ವಿವರ:
ಹನುಮಂತಪ್ಪ ಅವರ ವಯಸ್ಸು ಸುಮಾರು 50 ವರ್ಷ, ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಎತ್ತರ ಸುಮಾರು 5 ಅಡಿ 3 ಇಂಚು. ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾಗುವ ವೇಳೆ ಬಿಳಿ ಬಣ್ಣದ ದೀರ್ಘ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಹಣೆಯ ಮೇಲೆ ಶಸ್ತ್ರ ಚಿಕಿತ್ಸೆ ಮಾಡಿದ ಗುರುತು ಇದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





