Home Crime ಮಲ್ಪೆ: ಕಾರಿನಲ್ಲಿ ಗಾಂಜಾ ಪತ್ತೆ – ಇಬ್ಬರ ವಿರುದ್ಧ ಪ್ರಕರಣ ದಾಖಲು…!!

ಮಲ್ಪೆ: ಕಾರಿನಲ್ಲಿ ಗಾಂಜಾ ಪತ್ತೆ – ಇಬ್ಬರ ವಿರುದ್ಧ ಪ್ರಕರಣ ದಾಖಲು…!!

ಮಲ್ಪೆ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡಿದ್ದ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಮಲ್ಪೆ ಠಾಣೆಯ ಉಪನಿರೀಕ್ಷಕರಾದ ಅನೀಲ್ ಕುಮಾರ್ ಡಿ ಅವರು ದಿನಾಂಕ 28-03-2026 ರಂದು ಠಾಣೆಯ ಅಪರಾಧ ಕ್ರಮಾಂಕ 37/2026 (ಕಲಂ 281 BNS) ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತುದಾರರೊಂದಿಗೆ ಸ್ಥಳ ಮಹಜರು ನಡೆಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಹೂಡೆ–ಕೋಡಿಬೇಂಗ್ರೆ ರಸ್ತೆಯಲ್ಲಿರುವ ಶ್ರೀ ನಾಗಬ್ರಹ್ಮ ಬೊಬ್ಬರ್ಯ ದೈವಸ್ಥಾನದ ಸಮೀಪ ನಿಲ್ಲಿಸಿದ್ದ KA-20-MB-7666 ಸಂಖ್ಯೆಯ ಬಿಳಿ ಬಣ್ಣದ ಹುಂಡೈ ಕ್ರೆಟ್ಟಾ ಕಾರನ್ನು ಪಂಚರ ಸಮಕ್ಷಮ ಪರಿಶೀಲಿಸಿದಾಗ ಕಾರಿನೊಳಗೆ ಗಾಂಜಾ ದಂತೆ ಕಾಣುವ ಮಾದಕ ವಸ್ತು ಪತ್ತೆಯಾಗಿದೆ. ಪರಿಶೀಲನೆ ವೇಳೆ ಒಟ್ಟು 173.42 ಗ್ರಾಂ ತೂಕದ ಗಾಂಜಾ ಸಿಕ್ಕಿದ್ದು, ಇದರ ಅಂದಾಜು ಮೌಲ್ಯ ಸುಮಾರು ರೂ.8,000 ಎಂದು ತಿಳಿದುಬಂದಿದೆ.

ಇದಲ್ಲದೆ ಕಾರಿನಲ್ಲಿ ಸ್ಯಾಮ್‌ಸಂಗ್ ಕಂಪೆನಿಯ ಒಂದು ಮೊಬೈಲ್ ಫೋನ್ (ಅಂದಾಜು ಮೌಲ್ಯ ರೂ.6,000) ಹಾಗೂ ನೀಲಿ ಬಣ್ಣದ ಹೋನರ್ ಕಂಪೆನಿಯ ಮತ್ತೊಂದು ಮೊಬೈಲ್ ಫೋನ್ (ಅಂದಾಜು ಮೌಲ್ಯ ರೂ.5,000) ಸಹ ಪತ್ತೆಯಾಗಿ, ಮುಂದಿನ ಕ್ರಮಕ್ಕಾಗಿ ಸ್ಥಳ ಮಹಜರು ಮುಖಾಂತರ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿ ಮೊಹಮ್ಮದ್ ಫೈಜಲ್ ಹಾಗೂ ಇನ್ನೊಬ್ಬರು ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಕಾಯುತ್ತಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.