Home Crime 5 ಲಕ್ಷ ಲಂಚ ಸ್ವೀಕಾರ : ಕಾರ್ಯನಿರ್ವಾಹಕ ಎಂಜಿನಿಯರ್‌ ಸಹಾಯಕ ಎಂಜಿನಿಯರ್‌ ಅರೆಸ್ಟ್…!!

5 ಲಕ್ಷ ಲಂಚ ಸ್ವೀಕಾರ : ಕಾರ್ಯನಿರ್ವಾಹಕ ಎಂಜಿನಿಯರ್‌ ಸಹಾಯಕ ಎಂಜಿನಿಯರ್‌ ಅರೆಸ್ಟ್…!!

ಬೆಂಗಳೂರು: ನಿರ್ಮಾಣ ಕಾಮಗಾರಿಗೆ ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಲು ₹5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಿಬಿಎಂಪಿಯ ಹೆಬ್ಬಾಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಮಾಧವ ರಾವ್‌, ಸಹಾಯಕ ಎಂಜಿನಿಯರ್ (ಎಇ) ಸುರೇಂದ್ರ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

‘ಆರ್‌ಎಂವಿ ಬಡಾವಣೆಯಲ್ಲಿ ಸಂಜಯ್ ಎಂಬುವವರು ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದು, ವಿದ್ಯುತ್ ಕೇಬಲ್‌ ಅಳವಡಿಕೆಗೆ ಎನ್‌ಒಸಿ ಪಡೆಯಲು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಎಇಇ ಮತ್ತು ಇಎ ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು ₹5 ಲಕ್ಷ ಮತ್ತು ಎನ್‌ಒಸಿ ನೀಡಿದ ನಂತರ ₹5 ಲಕ್ಷ ನೀಡುವಂತೆ ಸೂಚಿಸಿದ್ದರು’ ಎಂದು ಲೋಕಾಯುಕ್ತ ‍ಪೊಲೀಸರು ಮಾಹಿತಿ ನೀಡಿದ್ದಾರೆ.

‘ಸಂಜಯ್ ಅವರು ಈ ಸಂಬಂಧ ದೂರು ನೀಡಿದ್ದರು. ಲೋಕಾಯುಕ್ತ ಡಿವೈಎಸ್‌ಪಿ ಸಿ.ವಸಂತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ಎಇಇ ಅವರ ಕಚೇರಿಗೆ ತೆರಳಿ ಹಣ ನೀಡುವಂತೆ ಸಂಜಯ್ ಅವರಿಗೆ ಸೂಚಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

ಅದರಂತೆ ಎಇಇ ಕಚೇರಿಗೆ ತೆರಳಿದ ಸಂಜಯ್ ಅವರು ಎಇ ಸುರೇಂದ್ರ ಅವರಿಗೆ ₹5 ಲಕ್ಷ ನೀಡಿದ್ದರು. ಈ ವೇಳೆ ದಾಳಿ ನಡೆಸಿ ಅವರನ್ನು ಬಮಧಿಸಲಾಯಿತು. ಸುರೇಂದ್ರ ಅವರ ಹೇಳಿಕೆ ಆಧರಿಸಿ, ಎಇಇ ಮಾಧವ ರಾವ್ ಅವರನ್ನೂ ಬಂಧಿಸಲಾಯಿತು. ಹಣವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ’ ಎಂದು ತಿಳಿಸಿದ್ದಾರೆ