
ಬೈಂದೂರು/ಕುಂದಾಪುರ: ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆ ಸ್ಕೂಟರ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡಿ ವಿಡಿಯೋ ವೈರಲ್ ಆಗಿದ್ದ ಯುವಕ ಇದೀಗ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನ ಯತ್ನ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದಾನೆ.
ಬಂಧಿತ ಆರೋಪಿಯನ್ನು ಪೌಜಾನ್ ಅಹ್ಮದ್ ಎಂದು ಗುರುತಿಸಲಾಗಿದೆ. ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೋಣಮಕ್ಕಿ ಎಂಬಲ್ಲಿ ಪಾತಿಮಾ ಎಂಬವರ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿ ಕಳ್ಳತನ ಯತ್ನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪಾತಿಮಾ ಅವರು ಮಲಗಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿ, ಮನೆಯಲ್ಲಿದ್ದ ಗೋದ್ರೇಜ್ ಅಲಮಾರಿಯನ್ನು ತೆರೆದು ಹುಡುಕಾಡುತ್ತಿದ್ದಾಗ ಶಬ್ದ ಕೇಳಿ ಎಚ್ಚರಗೊಂಡ ಪಾತಿಮಾ ಅವರು ಬೊಬ್ಬೆ ಹಾಕಿದಾಗ ಆರೋಪಿ ಹಿಂಬಾಗಿಲಿನಿಂದ ಪರಾರಿಯಾಗಿದ್ದನು.
ಈ ಕುರಿತು ಪಾತಿಮಾ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026 ರಂತೆ BNS ಕಲಂ 331(4), 305, 62 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಆರೋಪಿ ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆಗೆ ತಂದಿದ್ದ ಸ್ಕೂಟರ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡಿ, ಚಲಿಸುತ್ತಿದ್ದ ವಾಹನದಲ್ಲೇ ತರಹೇವಾರಿ ಸರ್ಕಸ್ ಪ್ರದರ್ಶಿಸಿದ್ದನು. ಈ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026 ರಂತೆ BNS ಕಲಂ 281, 125 ಹಾಗೂ ಮೋಟಾರ್ ವಾಹನ ಕಾಯ್ದೆ 184, 129 R/W 194D ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಭಾಗದಿಂದ ಬಾಡಿಗೆಗೆ ತರಲಾಗಿದ್ದ ದ್ವಿಚಕ್ರ ವಾಹನವನ್ನು ಬಳಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.




