Home Crime ಭಾರತೀಯ ರಾಯಭಾರ ಕಚೇರಿಯ ಹೆಸರು ಬಳಸಿ ವಂಚನೆ : 1,00,663ರೂ. ಕಳೆದುಕೊಂಡ ವಿದ್ಯಾರ್ಥಿ…!!

ಭಾರತೀಯ ರಾಯಭಾರ ಕಚೇರಿಯ ಹೆಸರು ಬಳಸಿ ವಂಚನೆ : 1,00,663ರೂ. ಕಳೆದುಕೊಂಡ ವಿದ್ಯಾರ್ಥಿ…!!

ಉಡುಪಿ: ಭಾರತೀಯ ರಾಯಭಾರ ಕಚೇರಿಯಿಂದ ಮಾತನಾಡುತ್ತಿರುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂ. ವರ್ಗಾಯಿಸಿಕೊಂಡ ಘಟನೆ ನಡೆದಿದೆ.

ಕಿನ್ನಿಮೂಲ್ಕಿಯ ಸಂದೇಶ್‌ (25) ವಂಚನೆಗೊಳಗಾದವರು. ಅವರು 2024ರಿಂದ ಐರ್ಲೆಂಡ್‌ನ‌ ಡಬ್ಲಿನ್‌ನಲ್ಲಿ ಎಂಎಸ್‌ ವಿಧ್ಯಾಭ್ಯಾಸ ಮಾಡುತ್ತಿದ್ದು, ಪ್ರಸ್ತುತ ರಜೆಯಲ್ಲಿ ಊರಲ್ಲಿದ್ದಾರೆ. ಜು. 30ರಂದು ಸಂಜೆ 6 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯು 353012060932 ಸಂಖ್ಯೆಯಿಂದ ಅವರಿಗೆ ಕರೆ ಮಾಡಿ “ನಾನು ಇಂಡಿಯನ್‌ ಎಂಬೆಸಿಯಿಂದ ಮಾತನಾಡುತ್ತಿದ್ದೇನೆ. ನೀವು ಐರ್ಲೆಂಡ್‌ನ‌ಲ್ಲಿ ಸಲ್ಲಿಸಿದ ಐಆರ್‌ಪಿ ಅರ್ಜಿಯಲ್ಲಿ ನಮೂದಿಸಿದ ಜನ್ಮದಿನಾಂಕ ತಪ್ಪಾಗಿದೆ. ಅದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ನಿಮ್ಮ ಪಾಸ್‌ಪೋರ್ಟನ್ನು “ಯೆಲ್ಲೋ ಗ್ರೂಪ್‌’ಗೆ ಸೇರಿಸಿ ನಿಮ್ಮ ವಿರುದ್ಧ ಕ್ರಮ ಜರಗಿಸಲಾಗುವುದು’ ಎಂದು ಹೆದರಿಸಿದ್ದನು. ಅದನ್ನು ನಂಬಿದ ಸಂದೇಶ್‌ ಅವರು ಆರೋಪಿಯು ನೀಡಿದ ಇ ಮೇಲ್‌ ಐಡಿಗೆ ತನ್ನ ಆಧಾರ್‌ ಕಾರ್ಡ್‌, ಜನ್ಮದಿನಾಂಕ ಪ್ರಮಾಣಪತ್ರ ಮತ್ತು ಮತದಾರರ ಚುನಾವಣೆ ಗುರುತಿನ ಚೀಟಿ ನಕಲು ಪ್ರತಿಗಳನ್ನು ಕಳುಹಿಸಿದ್ದರು. ಅನಂತರ ಆರೋಪಿಯು ಸಂದೇಶ್‌ ಅವರಲ್ಲಿ ಭದ್ರತೆಗೋಸ್ಕರ ವಿವಿಧ ಹಂತಗಳಲ್ಲಿ ಹಣವನ್ನು ವಿವಿಧ ಅಕೌಂಟ್‌ ನಂಬರ್‌ಗಳಿಗೆ ಕಟ್ಟಲು ಹೇಳಿ ನಿಮ್ಮ ಜನ್ಮದಿನಾಂಕ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಅನಂತರ ನೀವು ಕಟ್ಟಿದ ಎಲ್ಲ ಹಣವನ್ನು ಹಿಂದಿರುಗಿಸುತ್ತೇವೆ ಎಂದು ಹೇಳಿದ್ದನು.

ಆರೋಪಿ ನೀಡಿದ ಆಕ್ಸಿಸ್‌ ಬ್ಯಾಂಕ್‌ ಖಾತೆಗೆ ಸಂದೇಶ್‌ ಅವರು ತನ್ನ ಹಾಗೂ ತಂದೆಯ ಖಾತೆಯಿಂದ ಒಟ್ಟು 1,00,663 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದರು. ಅಪರಿಚಿತನು ಮತ್ತಷ್ಟು ಹಣವನ್ನು ನೀಡುವಂತೆ ಪೀಡಿಸಿದಾಗ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.