ಕುಂದಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ತಲ್ಲೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಅಜಾಗರೂಕ ಮತ್ತು ಅತಿವೇಗದ ಚಾಲನೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ದಿನಾಂಕ 24 ಮಾರ್ಚ್ ಸಂಜೆ ಸುಮಾರು 7:45ರ ವೇಳೆ, ಶ್ರೀನಿವಾಸ ಗಾಣಿಗ ಅವರು ಬೈಕ್‌ನಲ್ಲಿ ಸಂಗಮ್ ಕಡೆಯಿಂದ ಹೆಮ್ಮಾಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದರು. ಈ ವೇಳೆ ತಲ್ಲೂರು ಗ್ರಾಮದ ಪ್ರವಾಸಿ ಬಾರ್ ಮತ್ತು ರೆಸ್ಟೋರೆಂಟ್ ಸಮೀಪದ ವೇಬ್ರಿಡ್ಜ್ ಬಳಿ ವಿರುದ್ದ ದಿಕ್ಕಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ.
ರಮೇಶ್ ಎಂಬಾತ ಚಲಾಯಿಸುತ್ತಿದ್ದ ಬೈಕ್ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದಿದ್ದು, ಡಿಕ್ಕಿಯ ಪರಿಣಾಮ ಇಬ್ಬರೂ ಸವಾರರು ರಸ್ತೆಗೆ ಬಿದ್ದಿದ್ದಾರೆ. ಶ್ರೀನಿವಾಸ ಗಾಣಿಗ ಅವರಿಗೆ ಗಂಭೀರ ಗಾಯಗಳಾಗಿದ್ದು, ರಮೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಂಭೀರ ಗಾಯಗೊಂಡ ಶ್ರೀನಿವಾಸ ಗಾಣಿಗರನ್ನು ಮೊದಲು ಕುಂದಾಪುರದ ಆದರ್ಶ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





