Home Karavali Karnataka ಉಡುಪಿ : ಶ್ರೀ ಕೃಷ್ಣದರ್ಶನ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಿಎಂಗೆ ಯಶ್‌ಪಾಲ್‌ ಸಲಹೆ…!!

ಉಡುಪಿ : ಶ್ರೀ ಕೃಷ್ಣದರ್ಶನ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಿಎಂಗೆ ಯಶ್‌ಪಾಲ್‌ ಸಲಹೆ…!!

ಉಡುಪಿ: ಪದೇ ಪದೇ ನಿಮ್ಮ ಸರಕಾರದ ಮಂತ್ರಿಗಳು ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಸರಕಾರ ದಲ್ಲಿ ನೀವು ಕಿರಿಕಿರಿ ಅನುಭವಿಸುತ್ತಿದ್ದೀರಿ. ಶ್ರೀ ಕೃಷ್ಣಮಠಕ್ಕೆ ಬಂದು ಕೃಷ್ಣದರ್ಶನ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಷ್ಟದಲ್ಲಿರುವ ನಿಮಗೆ ಶ್ರೀಕೃಷ್ಣ -ಮುಖ್ಯ ಪ್ರಾಣ ಹಾಗೂ ಗೋವಿನ ದೋಷ ಇರಬಹುದು. ಅದು ಬಗೆ ಹರಿಯಬೇಕೆಂದರೆ ಒಂದು ಬಾರಿ ಮಠಕ್ಕೆ ಬನ್ನಿ. ಶ್ರೀ ಕೃಷ್ಣನ ದರ್ಶನ ಮಾಡಿ. ಗೋಮಾತೆಯ ದರ್ಶನ ಪಡೆಯಿರಿ. ನಿಮ್ಮ ಸಮಸ್ಯೆ ಬಗೆಹರಿಸಿಕೊಂಡು ಜೀವನ ಉಜ್ವಲ ಮಾಡಿಕೊಳ್ಳಿ. ಇಷ್ಟರವರೆಗೆ ನೀವು ಕೃಷ್ಣ ಮಠಕ್ಕೆ ಬಂದಿಲ್ಲ. ಈಗಲಾದರೂ ಕೃಷ್ಣ ಮಠಕ್ಕೆ ಬರಲು ದೇವರು ಬುದ್ದಿ ಕೊಡಲಿ. ಶಾಸಕನ ನೆಲೆಯಲ್ಲಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ ಎಂದರು.

ಮುಖ್ಯಮಂತ್ರಿಯವರು ಉಡುಪಿಗೆ ಬಂದರೆ ಸ್ವಾಗತ, ಕೇವಲ ಉಡುಪಿಗೆ ಬಂದು ಸಭೆ ಸಮಾರಂಭಗಳಲ್ಲಿ ಭಾಷಣ ಮಾಡಿದರೆ ಸಾಕಾಗದು, ಶ್ರೀ ಕೃಷ್ಣಮಠಕ್ಕೂ ಭೇಟಿ ನೀಡಲಿ. ಕನಕದಾಸರ ಪ್ರತಿಮೆಯನ್ನು ನಾವು ಸ್ಥಾಪಿಸಿದ್ದೇವೆ. ಅಷ್ಟಮಠಾಧೀಶರು ಕನಕದಾಸರಿಗೆ ಈ ಮೂಲಕ ಗೌರವ ಕೊಟ್ಟಿದ್ದಾರೆ. ನೀವೀಗ ನಿವೃತ್ತಿಯ ಅಂಚಿನಲ್ಲಿದ್ದು ನಿತ್ಯ ನಿಮ್ಮ ಪಕ್ಷದವರೇ ಕಾಲೆಳೆಯುತ್ತಿದ್ದಾರೆ. ಇಂದು, ನಾಳೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ. ಶ್ರೀ ಕೃಷ್ಣ ಮಠಕ್ಕೆ ಬಂದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.