Home Crime ಉಗ್ರ ಮೊಹಮ್ಮದ್‌ ಅಕ್ಬರ್‌ ಮಂಗಳೂರು ನ್ಯಾಯಾಲಯಕ್ಕೆ ಹಾಜರು : ಜು.23ಕ್ಕೆ ವಿಚಾರಣೆ…!!

ಉಗ್ರ ಮೊಹಮ್ಮದ್‌ ಅಕ್ಬರ್‌ ಮಂಗಳೂರು ನ್ಯಾಯಾಲಯಕ್ಕೆ ಹಾಜರು : ಜು.23ಕ್ಕೆ ವಿಚಾರಣೆ…!!

ಮಂಗಳೂರು: ಹೈದರಾಬಾದ್‌ನಲ್ಲಿ 2007ರಲ್ಲಿ ನಡೆದ ಅವಳಿ ಬಾಂಬ್‌ಬ್ಲಾಸ್ಟ್‌ ಪ್ರಕರಣದ ಮತ್ತು 2008 ರಲ್ಲಿ ಮುಂಬಯಿ ಸರಣಿ ಸ್ಫೋಟದ ಆರೋಪಿಗಳಲ್ಲಿ ಓರ್ವನಾದ ಉಗ್ರ ಮೊಹಮ್ಮದ್‌ ಅಕ್ಬರ್‌ ಇಸ್ಮಾಯಿಲ್‌ ಚೌಧರಿ ಎಂಬಾತನನ್ನು ಉಳ್ಳಾಲ ಠಾಣೆಯಲ್ಲಿ ಯುಎಪಿ ಆ್ಯಕ್ಟ್ ಮತ್ತು ಎಕ್ಸ್‌ಪ್ಲೋಸಿವ್‌ ಆ್ಯಕ್ಟ್ ನಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ತೆಲಂಗಾಣದ ಚೆರ್ಲಪಲ್ಲಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ಉಳ್ಳಾಲ ಪೊಲೀಸರು ಬಾಡಿ ವಾರೆಂಟ್‌ ಪಡೆದು, ತೆಲಂಗಾಣ ಪೊಲೀಸರ ಸಮಕ್ಷಮ ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ವಕೀಲರನ್ನು ನೇಮಿಸಲು ಅವಕಾಶ ಕಲ್ಪಿಸಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿದ್ದಾರೆ. ಸದ್ಯ ಆತನನ್ನು ವಾಪಾಸು ತೆಲಂಗಾಣಕ್ಕೆ ಕರೆದೊಯ್ಯಲಾಗಿದೆ.

ಹೈದರಾಬಾದ್‌ ಸ್ಫೋಟ ಪ್ರಕರಣದಲ್ಲಿ ಅಲ್ಲಿನ ಮೆಟ್ರೋ ಪೊಲಿಟನ್‌ ನ್ಯಾಯಾಲಯದಲ್ಲಿ ಮೊಹಮ್ಮದ್‌ ಅಕ್ಬರ್‌ ಇಸ್ಮಾಯಿಲ್‌ ಚೌಧರಿ ಮತ್ತು ಅನೀಖ್‌ ಶಫೀಕ್‌ ಸಯ್ಯದ್‌ ಎಂಬಾತನಿಗೆ ಈಗಾಗಲೇ ಗಲ್ಲು ಶಿಕ್ಷೆಗೆ ವಿಧಿಸಲಾಗಿದೆ. ಇವರಿಬ್ಬರೂ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಆರೋಪಿಗಳು ಎಂದು ಆರೋಪಿಸಲಾಗಿದೆ. ಮೂರನೇ ಆರೋಪಿ ಮೊಹಮ್ಮದ್‌ ತಾರಿಕ್‌ ಅಂಜುಂ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2007ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ನಲ್ಲಿ ಈತ ಭಾಗಿಯಾಗಿದ್ದ. ಉಳ್ಳಾಲ ಚೆಂಬುಗುಡ್ಡೆ ಮುಕ್ಕಚ್ಚೇರಿಯಲ್ಲಿ ಭಾಗದಲ್ಲಿ ಈತನ ಚಟುವಟಿಕೆಯಿತ್ತು. ಹೈದರಾಬಾದ್‌ ಬ್ಲಾಸ್ಟ್‌ನಲ್ಲಿ ಬಳಸಲಾದ ಸ್ಫೋಟಕಗಳನ್ನು ಮುಕ್ಕ ಚ್ಚೇರಿಯಿಂದಲೇ ಪೂರೈಸಲಾಗಿತ್ತು ಎಂದೂ ಹೇಳಲಾಗಿದೆ.

ಈತ ಪುಣೆಯ ಕೊಂಧ್ವಾ ಖುದ್‌ನ ಮಿಥಾ ನಗರ ಪ್ರದೇಶದ ನಿವಾಸಿ. ಭಟ್ಕಳದ ಸೋದರರಾದ ಯಾಸೀನ್‌ ಭಟ್ಕಳ್‌ ಮತ್ತು ಇಕ್ಬಾಲ್‌ ಭಟ್ಕಳ್‌ ಅವರ ಮೂಲಕ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ. ಕಂಪ್ಯೂಟರ್‌ ಹಾರ್ಡ್‌ವೇರ್‌ ಎಕ್ಸ್‌ಪರ್ಟ್‌ ಆಗಿದ್ದ ಈತ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಮುಂಬಯಿ, ಪುಣೆ, ಹೈದರಾಬಾದ್‌, ಮಂಗಳೂರು ಮುಂತಾದೆಡೆ ವಾಸ್ತವ್ಯವಿದ್ದು ಕಾರ್ಯಚಟುವಟಿಕೆ ನಡೆಸುತ್ತಿದ್ದನು.