ಕುಂದಾಪುರ : ಶಂಕರನಾರಾಯಣದಲ್ಲಿ ಅಕ್ರಮ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ ನಡೆಸಿದ್ದು, ಐವರನ್ನು ಬಂಧಿಸಿರುವ ಘಟನೆ ನಡೆದಿದೆ. ಬೆಳ್ವೆ ಗ್ರಾಮದ ಸುರ್ಗೋಳಿ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್–ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಅಕ್ಷಯ ಕುಮಾರಿ ಎಸ್.ಎನ್. ಅವರಿಗೆ ಬೀಟ್ ಸಿಬ್ಬಂದಿ ಜಯರಾಮ್ ನಾಯ್ಕರಿಂದ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಪೊಲೀಸರು ಬೆಳ್ವೆ ಗ್ರಾಮದ ಸುರ್ಗೋಳಿ ಪ್ರದೇಶಕ್ಕೆ ತೆರಳಿ ದಾಳಿ ನಡೆಸಿದರು.
ಈ ವೇಳೆ ನೆಲದ ಮೇಲೆ ಚಾಪೆ ಹಾಸಿಕೊಂಡು ವೃತ್ತಾಕಾರದಲ್ಲಿ ಕುಳಿತು ಅಂದರ್–ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ.
ಬಂಧಿತರನ್ನು ಡ್ಯಾನೀಶ್ ನೊರೋನಾ, ರಾಘವೇಂದ್ರ ಪೂಜಾರಿ, ಹರೀಶ ಶೆಟ್ಟಿ, ಚಿರಾಗ್ ಶೆಟ್ಟಿ ಹಾಗೂ ಕಿರಣ ಶೆಟ್ಟಿ ಎಂದು ಗುರುತಿಸಲಾಗಿದೆ. ಪ್ರಕಾಶ್ ಪೂಜಾರಿ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.
ದಾಳಿಯ ವೇಳೆ ಪೊಲೀಸರು ₹11,160 ನಗದು, 52 ಇಸ್ಪೀಟ್ ಎಲೆಗಳು, ಚಾಪೆ ಹಾಗೂ ಒಂದು ಮೋಟಾರ್ ಸೈಕಲ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.





