Home Latest ಸಮಾಧಾನ ಮಹೋತ್ಸವ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ : ಸದಾನಂದ ಕಾಂಚನ್…!!

ಸಮಾಧಾನ ಮಹೋತ್ಸವ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ : ಸದಾನಂದ ಕಾಂಚನ್…!!

ಉಡುಪಿ : ಉಡುಪಿಯ ಮಿಷನ್ ಕಾಂಪೌಂಡ್ನಲ್ಲಿ ಮಾ. 20ರಿಂದ 22ರವರೆಗೆ ನಡೆಯಲಿರುವ “ಸಮಾಧಾನ ಮಹೋತ್ಸವ” ಕಾರ್ಯಕ್ರಮಕ್ಕೆ ಮಾನ್ಯ ಹೈಕೋರ್ಟ್ ಅನುಮತಿ ನೀಡಿರುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸದಾನಂದ ಕಾಂಚನ್ ತಿಳಿಸಿದ್ದಾರೆ.

ಫೆಲೋಶಿಪ್ ಆಫ್ ಉಡುಪಿ ಚರ್ಚಸ್ ವತಿಯಿಂದ ಆಯೋಜಿಸಲಾದ ಈ ಮೂರು ದಿನಗಳ ಆತ್ಮಿಕ ಮಹೋತ್ಸವಕ್ಕಾಗಿ ಕಳೆದ ಹಲವು ತಿಂಗಳಿನಿಂದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಮಹೋತ್ಸವದಲ್ಲಿ ಖ್ಯಾತ ಪ್ರವಚನಕಾರರಾದ ಘನ ಮೋಹನ್ ಸಿ. ಲಾಝರಸ್ ಭಾಗವಹಿಸಿ ಆತ್ಮಿಕ ಸಂದೇಶ ನೀಡಲಿದ್ದಾರೆ.

ಕ್ರೈಸ್ತ ಸಮುದಾಯದಲ್ಲಿ ಪ್ರಸ್ತುತ ತಪಸ್ಸಿನ ಕಾಲ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತಿ, ಶಾಂತಿ ಮತ್ತು ಸಮಾಧಾನದ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿದ್ದರೂ, ಕೆಲವು ಸಂಘಟನೆಗಳಿಂದ ವ್ಯಕ್ತವಾದ ವಿರೋಧದ ಹಿನ್ನೆಲೆ ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ವಿಚಾರಣೆ ನಡೆಸಿದ ಹೈಕೋರ್ಟ್, ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಪರಿಗಣಿಸಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ. ಜೊತೆಗೆ, ಕಾರ್ಯಕ್ರಮ ಶಾಂತಿಯುತವಾಗಿ ನಡೆಯುವಂತೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಿದೆ.

ಈಗಾಗಲೇ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಯಾವುದೇ ಅಡಚಣೆ ಇಲ್ಲದೆ ಮಹೋತ್ಸವ ಯಶಸ್ವಿಯಾಗಿ ಜರುಗಲಿದೆ ಎಂಬ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ಯಾವುದೇ ಗಾಳಿಸುದ್ದಿ ಅಥವಾ ಅಪಪ್ರಚಾರಗಳಿಗೆ ಕಿವಿಗೊಡದೆ, ಶಾಂತಿ ಮತ್ತು ಸೌಹಾರ್ದತೆಯ ಮನೋಭಾವದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸದಾನಂದ ಕಾಂಚನ್ ಮನವಿ ಮಾಡಿದ್ದಾರೆ.

ಇದೇ ವೇಳೆ, ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಮಾನ್ಯ ಹೈಕೋರ್ಟ್‌ಗೆ ಅವರು ಕೃತಜ್ಞತೆ ಸಲ್ಲಿಸಿದರು. ಹಾಗೆಯೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನವು ಎಲ್ಲಾ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸಿರುವುದರಿಂದ ಅದಕ್ಕೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಈ ಆತ್ಮಿಕ ಮಹೋತ್ಸವವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲಿ. ಭಾಗವಹಿಸುವ ಪ್ರತಿಯೊಬ್ಬರಿಗೂ ಆತ್ಮಿಕ ಪ್ರೇರಣೆ, ನೆಮ್ಮದಿ ಮತ್ತು ಹೊಸ ಆಶಾಭಾವನೆಯನ್ನು ನೀಡಲಿ ಎಂದು ಅವರು ಹಾರೈಸಿದರು. ಕಾರ್ಯಕ್ರಮವು ಯಶಸ್ವಿಯಾಗಿ, ಶಾಂತಿಯುತವಾಗಿ ಜರುಗಿ ಎಲ್ಲರಿಗೂ ಆಶೀರ್ವಾದಕರವಾಗಲಿ ಎಂಬುದು ಅವರ ಹಾರೈಕೆ.