ಮಂಗಳೂರು: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ತಾನು ಕೆಲಸ ನಿರ್ವಹಿಸಿದ್ದ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಪಿವಿಎಸ್ ವೃತ್ತದ ಬಳಿಯ ರಾಮಭವನ ಕಾಂಪ್ಲೆಕ್ಸ್ ನೆಲ ಮಹಡಿಯ ಕೆನರಾ ಬ್ಯಾಂಕ್ ಸ್ಟೋರ್ ರೂಮ್ ನಲ್ಲಿ ಸಂಭವಿಸಿದೆ.
ಮೃತರನ್ನು ಅಳಕೆ ನಿವಾಸಿ ಗಿರಿಧರ್ ಯಾದವ್ (61) ಎಂದು ತಿಳಿದು ಬಂದಿದೆ.
ಇವರು ಕೆನರಾ ಬ್ಯಾಂಕ್ ಕೊಡಿಯಾಲ್ ಬೈಲ್ ಶಾಖೆಯಲ್ಲಿ 40 ವರ್ಷ ಕಾರ್ಯ ನಿರ್ವಹಿಸಿದ್ದು ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಆದರೂ ಬ್ಯಾಂಕ್ ಮೇಲಿನ ಪ್ರೀತಿಗೆ ಕಚೇರಿಗೆ ಬಂದು ಹೋಗುತ್ತಿದ್ದರು. ನಿನ್ನೆ ಸಂಜೆ ರಾಮಭವನ ಕಾಂಪ್ಲೆಕ್ಸ್ ಬ್ಯಾಂಕ್ ಕಚೇರಿಗೆ ಬಂದಿದ್ದವರು ಮನೆಗೆ ಹಿಂದಿರುಗಿರಲಿಲ್ಲ. ಈ ಹಿನ್ನೆಲೆ ಅವರ ಪತ್ನಿ ಬಂದರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಇಂದು ಬೆಳಗ್ಗೆ ಬ್ಯಾಂಕ್ ಬಾಗಿಲು ತೆರೆದಾಗ ಬ್ಯಾಂಕಿನ ಸ್ಟೋರ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಗಿರಿಧರ್ ಯಾದವ್ ಅವರು ರಾಜ್ಯ ಮಟ್ಟದ ಪವರ್ ಲಿಪ್ಪರ್ ಆಗಿದ್ದು, ಹಲವಾರು ಪದಕಗಳನ್ನು ಗಳಿಸಿದ್ದಾರೆ. ಅವರಿಗೆ ಆರೋಗ್ಯದ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದೆ.
ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.