ಮಂಗಳೂರು : ನಗರದ ಹೊರವಲಯದ ಪಡುಶೆಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮರಕಡ ಕುಂಜತ್ತಬೈಲು ನಿವಾಸಿ ಪ್ರತೀಕ್ (32) ಮತ್ತು ಯೆಯ್ಯಾಡಿ ದಂಡಕೇರಿ ನಿವಾಸಿ ವೀಕ್ಷಿತ್ (21) ಬಂಧಿತ ಆರೋಪಿಗಳು.
ಕಾವೂರು ಪೊಲೀಸರು ಗಸ್ತಿನಲ್ಲಿದ್ದ ವೇಳೆ ಪಡುಶೆಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಇಬ್ಬರನ್ನು ವಿಚಾರಣೆ ಒಳಪಡಿಸಿದ್ದಾರೆ. ಈ ವೇಳೆ ಅವರು ಎಂಡಿಎಂಎ ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ತಪಾಸಣೆ ನಡೆಸಿದಾಗ ಪ್ರತೀಕ್ ಬಳಿ ಸುಮಾರು 30 ಸಾವಿರ ರೂ. ಮೌಲ್ಯದ 2.29 ಗ್ರಾಂ ತೂಕದ ಎಂಡಿಎಂಎ ಮತ್ತು ವೀಕ್ಷಿತ್ ಬಳಿ 40 ಸಾವಿರ ರೂ. ಮೌಲ್ಯದ 4.03 ಗ್ರಾಂ ತೂಕದ ಎಂಡಿಎಂಎ ಪತ್ತೆಯಾಗಿದೆ. ಜತೆಗೆ 20 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್, 5 ಲಕ್ಷ ರೂ. ಮೌಲ್ಯದ ಕಾರು, 350 ರೂ. ಮೌಲ್ಯದ ಡಿಜಿಟಲ್ ತೂಕ ಮಾಪನ ಯಂತ್ರ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



