ಉಡುಪಿ, ಮಾ.16: ಸುಮಾರು 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಮಲ್ಪೆ ಪೊಲೀಸ್ ಠಾಣೆ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ನಡೆದಿದೆ.
ಮಾನ್ಯ CJM ನ್ಯಾಯಾಲಯ ಉಡುಪಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಆರಿಫ್ (ಮಹಮ್ಮದ್ ಅವರ ಪುತ್ರ) ಎಂಬಾತ ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಈತನನ್ನು ಮಲ್ಪೆ ಪೊಲೀಸ್ ಠಾಣೆಯ ವಾರೆಂಟ್ ಸಿಬ್ಬಂದಿಗಳಾದ ಎಚ್‌ಸಿ ಸುರೇಶ್ ಕುಮಾರ್ ಮತ್ತು ಎಚ್‌ಸಿ ವಿಶ್ವನಾಥ್ ಅವರು ಸೋಮವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕೊಯ್ಲ ಗ್ರಾಮದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತನನ್ನು ನಂತರ ಉಡುಪಿ CJM ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಮಾರ್ಚ್ 28, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.



