ಪಡುಬಿದ್ರಿ: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಮಿನಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧರು ಮೃತಪಟ್ಟ ದುರ್ಘಟನೆ ಪಡುಬಿದ್ರಿ ಸಮೀಪ ನಂದಿಕೂರಿನಲ್ಲಿ ನಡೆದಿದೆ.
ಮೃತರನ್ನು ನಂದಿಕೂರು ಗ್ರಾಮದ ಪಾಂಡ್ಯರ್ ಕಾಂಪ್ಲೆಕ್ಸ್ ಬಳಿ ವಾಸವಾಗಿದ್ದ ಲಿಂಗಪ್ಪ ಕಾಡ್ಯ ಶೆಟ್ಟಿ (77) ಎಂದು ಗುರುತಿಸಲಾಗಿದೆ.
ಪಿರ್ಯಾದಿದಾರರಾದ ಪದ್ಮನಾಭ ಆಚಾರ್ಯ (60) ಅವರ ಮಾಹಿತಿಯಂತೆ, ಮಾ.13 ರಂದು ಸಂಜೆ ಸುಮಾರು 7:15 ಗಂಟೆಯ ವೇಳೆಗೆ ಅವರು ರಾಮ ಮಂದಿರದ ಬಳಿ ಪಾಂಡ್ಯರ್ ಕಾಂಪ್ಲೆಕ್ಸ್ ಹತ್ತಿರ ನಿಂತಿದ್ದ ವೇಳೆ ಪರಿಚಯದ ಲಿಂಗಪ್ಪ ಕಾಡ್ಯ ಶೆಟ್ಟಿ ಅವರು ತಮ್ಮ ಬಿಲ್ಡಿಂಗ್ ಸಮೀಪ ರಾಜ್ಯ ಹೆದ್ದಾರಿ-01ರ ಪಡುಬಿದ್ರಿ–ಕಾರ್ಕಳ ರಸ್ತೆಯನ್ನು ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದರು.
ಈ ವೇಳೆ ಪಡುಬಿದ್ರಿ ಕಡೆಯಿಂದ ಬರುತ್ತಿದ್ದ KA19AD1839 ಸಂಖ್ಯೆಯ ಮಿನಿ ಟಿಪ್ಪರ್ ಲಾರಿಯನ್ನು ಚಾಲಕ ಪುರಂದರ ಎಂಬಾತನು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ಲಿಂಗಪ್ಪ ಕಾಡ್ಯ ಶೆಟ್ಟಿ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದಾರೆ.
ಘಟನೆಯ ಬಳಿಕ ಪಿರ್ಯಾದಿದಾರರು ಹಾಗೂ ಸ್ಥಳೀಯರು ಗಾಯಗೊಂಡ ಲಿಂಗಪ್ಪ ಕಾಡ್ಯ ಶೆಟ್ಟಿಯನ್ನು ಉಪಚರಿಸಿ ನೋಡಿದಾಗ ತಲೆಗೆ ಮತ್ತು ಎದೆಗೆ ಗಂಭೀರ ಗಾಯವಾಗಿರುವುದು ಕಂಡುಬಂದಿದೆ. ತಕ್ಷಣ ಆಂಬುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



