Home Karnataka News ಆನೇಕಲ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ-ಹತ್ಯೆ: ತಮಿಳುನಾಡಿನಲ್ಲಿ ಶವ ಪತ್ತೆ..!

ಆನೇಕಲ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ-ಹತ್ಯೆ: ತಮಿಳುನಾಡಿನಲ್ಲಿ ಶವ ಪತ್ತೆ..!

​ಆನೇಕಲ್: ಹಳೆಯ ವೈಷಮ್ಯ ಹಾಗೂ ವ್ಯವಹಾರದ ಏಳಿಗೆಯನ್ನು ಸಹಿಸದ ದುಷ್ಕರ್ಮಿಗಳ ತಂಡವೊಂದು ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ (35) ಎಂಬುವವರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ, ತಮಿಳುನಾಡಿನ ಡೆಂಕಣಿಕೋಟೆ ಬಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ

ಹೊನ್ನಕಳಸಾಪುರ ಗ್ರಾಮದ ನಿವಾಸಿಯಾದ ಗೋಪಾಲ್ ಅವರು ಮಾರ್ಚ್ 08ರಂದು ಭಾನುವಾರ ಸಂಜೆ ತಮ್ಮ ಸ್ನೇಹಿತ ಅತೀಶ್ ಅವರೊಂದಿಗೆ ಸ್ನೇಹಿತನೊಬ್ಬನಿಗೆ ಹೆಣ್ಣು ನೋಡುವ ಕಾರ್ಯಕ್ರಮಕ್ಕೆ ಹೋಗಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ರಾತ್ರಿ ಸುಮಾರು 7.30ರ ವೇಳೆಗೆ ಕರ್ಪೂರು ಗೇಟ್ ಬಳಿ ಬರುತ್ತಿದ್ದಂತೆ, ದುಷ್ಕರ್ಮಿಗಳು ತಮ್ಮ ವಾಹನದಿಂದ ಗೋಪಾಲ್ ಅವರ ಕಾರಿಗೆ ಅಪಘಾತವೆಂಬಂತೆ ಡಿಕ್ಕಿ ಹೊಡೆದಿದ್ದಾರೆ.

​ಕಾರಿನಿಂದ ಇಳಿಯುತ್ತಿದ್ದಂತೆ ಗೋಪಾಲ್ ಮತ್ತು ಅತೀಶ್ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿದ ಕಿರಾತಕರ ಗ್ಯಾಂಗ್, ಗೋಪಾಲ್‌ನನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಅಪಹರಿಸಿಕೊಂಡು ತಮಿಳುನಾಡಿನತ್ತ ಪರಾರಿಯಾಗಿತ್ತು. ಈ ವೇಳೆ ಜೊತೆಯಲ್ಲಿದ್ದ ಅತೀಶ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ತನಿಖೆ ಆರಂಭಿಸಿದ ಬೆನ್ನಲ್ಲೇ, ಮಾರ್ಚ್ 09 ತಮಿಳುನಾಡಿನ ಡೆಂಕಣಿಕೋಟೆ ಸಮೀಪ ಗೋಪಾಲ್ ಅವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆನೇಕಲ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ, ಅನುಮಾನದ ಹಿನ್ನೆಲೆಯಲ್ಲಿ ಆರೋಪಿ ಮೋಹನ್ ಬಾಬು ಎಂಬುವವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

 

ಮೃತ ಗೋಪಾಲ್ ಮತ್ತು ಪ್ರಮುಖ ಆರೋಪಿ ಎನ್ನಲಾದ ಮೋಹನ್ ಬಾಬು ಈ ಹಿಂದೆ ಜೊತೆಯಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಆದರೆ ವ್ಯವಹಾರದಲ್ಲಿ ಗೋಪಾಲ್ ಅವರ ಏಳಿಗೆಯನ್ನು ಮೋಹನ್ ಸಹಿಸುತ್ತಿರಲಿಲ್ಲ ಎನ್ನಲಾಗಿದೆ.

​”10 ವರ್ಷಗಳ ಹಿಂದೆ ಗೋಪಾಲ್ ಮದುವೆಯಾಗಿದ್ದ ಸ್ವಾತಿ ಎಂಬಾಕೆಯ ಮೇಲೆ ಮೋಹನ್‌ಗೆ ಮೋಹವಿತ್ತು. ಇದೇ ವಿಷಯಕ್ಕೆ ಇಬ್ಬರ ನಡುವೆ ದ್ವೇಷ ಬೆಳೆದಿತ್ತು. ಎರಡು ವರ್ಷಗಳ ಹಿಂದೆಯೂ ಒಮ್ಮೆ ಗೋಪಾಲ್‌ನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಲಾಗಿತ್ತು. ಈಗ 25 ಲಕ್ಷ ರೂಪಾಯಿ ಸುಪಾರಿ ನೀಡಿ ಈ ಕೃತ್ಯ ಎಸಗಲಾಗಿದೆ” ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

 

ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸುಪಾರಿ ಹಂತಕರ ಕೈವಾಡದ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.